ಹೈದರಾಬಾದ್ : ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬಗ್ಗೆ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಷ್ಟದ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕೆಂಬುವುದು ಅವರಿಗೆ ಗೊತ್ತಿದೆ. ಹಾಗಾಗಿ, 4ನೇ ಟೆಸ್ಟ್ ಅವರ ಕೈವಶವಾಯಿತು ಎಂದು ಟೀಂ ಇಂಡಿಯಾ ತಂಡದ ಆಟಗಾರರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಓವಲ್ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 157 ರನ್ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. ಈ ಪ್ರಮಾಣದ ಅಂತರದಿಂದ ಗೆಲುವು ಸಾಧಿಸಿದ್ದಕ್ಕೆ ಟೀಂ ಇಂಡಿಯಾ ಬಗ್ಗೆ ಕ್ರಿಸ್ ಸಿಲ್ವರ್‌ವುಡ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 191 ರನ್ಗಳಿಗೆ ಭಾರತ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡರೂ ರೋಚಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಅವರ ಮೇಲೆ ನಾವು ಸಾಕಷ್ಟು ಒತ್ತಡ ಹಾಕಲಾಯಿತಾದರೂ ಅವಕಾಶವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫರಾಗಿದ್ದೇವೆ. ಕಾರಣ ಕಷ್ಟದ ಸನ್ನಿವೇಶಗಳಲ್ಲಿ ಹೇಗೆ ಹೋರಾಡಬೇಕೆಂಬುವುದು ಅವರಿಗೆ ಗೊತ್ತು ಎಂದಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಅವರ ಎಚ್ಚರಿಕೆಯ ಬೌಲಿಂಗ್ ಹಾಗೂ ಶಾರ್ದೂಲ್ ಠಾಕೂರ್ ಅವರ ಸರ್ವತೋಮುಖ ಪ್ರದರ್ಶನದ ಮುಂದೆ ಇಂಗ್ಲೆಂಡ್ ತಂಡ ಸೋಲೊಪ್ಪಿಕೊಳ್ಳಬೇಕಾಯಿತು. ಬ್ಯಾಟಿಂಗ್ನಲ್ಲಿಯೂ ಕೂಡ ಸಾಕಷ್ಟು ಬದಲಾವಣೆ ಆಗಿದ್ದರಿಂದ ಜಯ ಟೀಂ ಇಂಡಿಯಾದ ಪಾಲಾಗಿದೆ.
ಇಂಗ್ಲೆಂಡ್‌ನ ಆರಂಭಿಕ ಆಟ ಬಿರುಸಾಗಿದ್ದರೂ ಭಾರತದ ಬೌಲರ್ಗಳ ದಾಳಿಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನೆಲಕಚ್ಚಿತು. ಓವಲ್ ಮೈದಾನದಲ್ಲಿ ಟೀಂ ಇಂಡಿಯಾ 50 ವರ್ಷಗಳ ಬಳಿಕ ದಾಖಲೆಯ ಗೆಲುವು ಪಡೆದಿದ್ದು ಕೊನೆಯ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ನಡೆಯಲಿದೆ.