ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 354 ರನ್‌ಗಳ ಬೃಹತ್ ಹಿನ್ನಡೆ ಜೊತೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದು, ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿದೆ.
ಪಂದ್ಯದ ಮೂರನೇ ದಿನದಾಟದಲ್ಲಿ ರೋಹಿತ್ ಶರ್ಮಾ (59) ಹಾಗೂ ಚೇತೇಶ್ವರ್ ಪೂಜಾರ ಭಾರತದ ಪಾಳಯದಲ್ಲಿ ಭರವಸೆ ಮೂಡಿಸಿದರು.
ದ್ವಿತೀಯ ಇನ್ನಿಂಗ್ಸ್‌ನಲ್ಲೂ ಆರಂಭಿಕ ಆಘಾತ ಅನುಭವಿಸಿದ ಭಾರತ, ಕೆ.ಎಲ್. ರಾಹುಲ್ (8) ಎರಡಂಕಿ ರನ್ ಗಳಿಸುವ ಮುನ್ನವೇ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದರು. ಬಳಿಕ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ಉತ್ತಮ ಜೊತೆಯಾಟ ಟೀಂ ಇಂಡಿಯಾ ಪಾಳಯದಲ್ಲಿ ಭರವಸೆ ಮೂಡಿಸಿತು.
ಉತ್ತಮವಾಗಿ ಇನ್ನಿಂಗ್ಸ್ ಕಟ್ಟುತ್ತಿದ್ದ ರೋಹಿತ್ ಶರ್ಮಾ (59) ಅರ್ಧಶತಕ ಗಳಿಸಿದರು. ಈ ಬೆನ್ನಲ್ಲೇ ರಾಬಿನ್ಸನ್ ದಾಳಿಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಹಾಗೂ ಪೂಜಾರ 82 ರನ್‌ಗಳ ಜೊತೆಯಾಟವಾಡಿದರು.
(ರೋಹಿತ್ ಶರ್ಮಾ ವಿಕೆಟ್ ಪತನವಾಗ್ತಿದ್ದಂತೆ ಬ್ಯಾಟ್ ಮಾಡಲು ಮೈದಾನಕ್ಕಿಳಿದ ಜಾರ್ವೋ.. ಮುಂದೇನಾಯ್ತು ನೋಡಿ!)
ನಂತರ ಪೂಜಾರ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮತ್ತಷ್ಟು ಬಲ ತುಂಬಿದರು. ಆಕ್ರಮಣಕಾರಿ ಬ್ಯಾಟಿಂಗ್ಗೆ ಇಳಿದ ಪೂಜಾರ ಅರ್ಧಶತಕ ಬಾರಿಸಿದರು. ಈ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಿದರು.
ಇತ್ತ ಕೊಹ್ಲಿ ಕೂಡ ಜವಾಬ್ದಾರಿಯುತ ಆಟ ಪ್ರದರ್ಶಿಸುತ್ತಿದ್ದು, ಅರ್ಧಶತಕದ ಹೊಸ್ತಿಲಲ್ಲಿದ್ದಾರೆ. ಪೂಜಾರ (91) ಹಾಗೂ ಕೊಹ್ಲಿ (41) ರನ್ ಗಳಿಸಿ ನಾಲ್ಕನೇ ದಿನಕ್ಕೆ ಆಟ ಕಾಯ್ದಿರಿಸಿಕೊಂಡಿದ್ದಾರೆ. ಮೂರನೇ ದಿನದಾಂತ್ಯಕ್ಕೆ ಭಾರತ 80 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 215 ರನ್ಗಳಿಸಿ 139 ರನ್‌ಗಳ ಹಿನ್ನಡೆಯಲ್ಲಿದೆ.
ಇಂಗ್ಲೆಂಡ್ಗೆ ಬೃಹತ್ ಮುನ್ನಡೆ
ಇದಕ್ಕೂ ಮುನ್ನ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ 432 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 354 ರನ್‌ಗಳ ಬೃಹತ್ ಮುನ್ನಡೆ ಗಳಿಸಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ ಜೋ ರೂಟ್ (121) ಭರ್ಜರಿ ಶತಕ, ರೋರಿ ಬರ್ನ್ಸ್ (61), ಹಸೀಬ್ ಹಮೀದ್ (68) ಹಾಗೂ ಡೇವಿಡ್ ಮಲಾನ್ (70) ಆಕರ್ಷಕ ಅರ್ಧಶತಕ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. ಭಾರತದ ಪರ ಮೊಹಮ್ಮದ್ ಶಮಿ ನಾಲ್ಕು ಮತ್ತು ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಪಡೆದರು. (ಸ್ಟನ್ನಿಂಗ್ ಕ್ಯಾಚ್ ಹಿಡಿದು, ರಾಹುಲ್ಗೆ ಪೆವಿಲಿಯನ್ ಹಾದಿ ತೋರಿಸಿದ ಬೈರ್ಸ್ಟೋವ್!)
ಮೊದಲ ಇನ್ನಿಂಗ್ಸ್‌ನಲ್ಲಿ ಜೇಮ್ಸ್ ಆ್ಯಂಡರ್ಸನ್ (6ಕ್ಕೆ 3 ವಿಕೆಟ್) ಹಾಗೂ ಕ್ರೇಗ್ ಓವರ್ಟನ್ (14ಕ್ಕೆ 3 ವಿಕೆಟ್) ಬೌಲಿಂಗ್ ದಾಳಿಗೆ ವಿರಾಟ್ ಕೊಹ್ಲಿ ತತ್ತರಿಸಿ, ಕೇವಲ 78 ರನ್‌ಗಳಿಗೆ ಆಲೌಟ್ ಆಗಿತ್ತು.