ಲಂಡನ್: ಹಲವು ವರ್ಷಗಳಿಂದ ನಿಂತು ಹೋಗಿರುವ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನು ನಡೆಸಲು ಇಂಗ್ಲೆಂಡ್ ಮುಂದೆ ಬಂದಿದ್ದು, ತನ್ನ ನೆಲದಲ್ಲಿ ಸರಣಿ ಆಯೋಜನೆ ಮಾಡಲು ಪ್ರಸ್ತಾಪ ಸಲ್ಲಿಸಿದೆ. ಆದರೆ, ಇದನ್ನು ಬಿಸಿಸಿಐ ತಿರಸ್ಕರಿಸಿದೆ.
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ದ್ವಿಪಕ್ಷೀಯ ಟೆಸ್ಟ್ ಸರಣಿಯನ್ನು ಆಯೋಜಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಅನೌಪಚಾರಿಕವಾಗಿ ಪ್ರಸ್ತಾಪ ಸಲ್ಲಿಸಿದೆ. ಇದರಲ್ಲಿ ಮೂರು ಪಂದ್ಯಗಳ ಟೆಸ್ಟ್ ಆಡಿಸಲು ಇಂಗ್ಲೆಂಡ್ ತನ್ನ ಮೈದಾನವನ್ನು ನೀಡಲಾಗುವುದು ಎಂದು ಹೇಳಿತ್ತು. ಬಿಸಿಸಿಐ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದೆ.
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ವಾಣಿಜ್ಯ ಲಾಭಕ್ಕಾಗಿ ಈ ಪ್ರಸ್ತಾಪವನ್ನು ಮಾಡಿದ್ದು, ಬಿಸಿಸಿಯ ಅಧಿಕಾರಿಗಳು ಈ ಮನವಿಯನ್ನು ತಳ್ಳಿ ಹಾಕಿದ್ದಾರೆ. ಇದು ಮುಂದೆಂದೂ ಸಂಭವಿಸುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ್ದಾರೆ.
ಭಾರತ- ಪಾಕಿಸ್ತಾನದ ಮಧ್ಯೆ ಸರಣಿ ನಡೆಸುವುದು ಬಿಸಿಸಿಐ ನಿರ್ಧರಿಸುವ ವಿಷಯವಾಗಿ ಉಳಿದಿಲ್ಲ. ಇದು ಭಾರತ ಸರ್ಕಾರದ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಹೀಗಾಗಿ ತಟಸ್ಥ ಸ್ಥಳದಲ್ಲಿ ದ್ವಿಪಕ್ಷೀಯ ಸರಣಿ ಆಯೋಜನೆ ಮಾಡುವುದು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ 2012 ರಲ್ಲಿ ಭಾರತದಲ್ಲಿ ದ್ವಿಪಕ್ಷೀಯ ಸರಣಿ ಆಡಿದ್ದರು. ನೆರೆಹೊರೆ ದೇಶಗಳ ಮಧ್ಯೆ ರಾಜಕೀಯ ಬಿಕ್ಕಟ್ಟಿನಿಂದಾಗಿ ಉಭಯ ರಾಷ್ಟ್ರಗಳ ಮಧ್ಯೆ ಸರಣಿ ಆಯೋಜನೆ ನಿಂತು ಹೋಗಿದೆ. ಐಸಿಸಿ ನಡೆಸುವ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳ ಮುಖಾಮುಖಿಯಾಗಿವೆ.
ಓದಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022-23 ; ಕರ್ನಾಟಕ ಸಂಭಾವ್ಯ ತಂಡ ಪ್ರಕಟ