ಕಾನ್ಪುರ : ಲೆಜೆಂಡರಿ ಬ್ಯಾಟರ್ ಮತ್ತು ಭಾರತ ತಂಡದ ಮುಖ್ಯ ಕೋಚ್ ಮತ್ತೊಮ್ಮೆ ತಾವೊಬ್ಬ ವಿಭಿನ್ನವಾಗಿ ಆಲೋಚಿಸುವ ಕೋಚ್ ಎಂದು ತಮ್ಮ ಕಾರ್ಯದಿಂದ ಸಾಬೀತು ಪಡಿಸಿದ್ದಾರೆ.
ಸೋಮವಾರ ಡ್ರಾನಲ್ಲಿ ಅಂತ್ಯಗೊಂಡ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ಗೆ ಅತ್ಯುತ್ತಮ ಪಿಚ್ ಸಿದ್ಧಪಡಿಸಿದ ಮೈದಾನ ಸಿಬ್ಬಂದಿಗೆ ₹35,000 ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಶಿವಕುಮಾರ್ ನೇತೃತ್ವದ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದ ಸಿಬ್ಬಂದಿ ಈ ಪಂದ್ಯಕ್ಕೆ ಪಿಚ್ ಸಿದ್ಧಪಡಿಸಿದ್ದರು. ಪಂದ್ಯಕ್ಕೂ ಮೊದಲೇ ಪಿಚ್ ಕ್ಯುರೇಟರ್ ಯಾವುದೇ ಕಾರಣಕ್ಕೂ ಈ ಟೆಸ್ಟ್ ಎರಡು ಅಥವಾ ಮೂರು ದಿನಗಳಲ್ಲಿ ಅಂತ್ಯವಾಗುವುದಿಲ್ಲ ಎಂದು ಭರವಸೆ ನೀಡಿದರು.
ಅವರು ಹೇಳಿದ ಹಾಗೆ ಈ ಪಿಚ್ ಕೊನೆಯ ದಿನದವರೆಗೂ ಪಂದ್ಯವನ್ನು ಕೊಂಡೊಯ್ದು ಟೆಸ್ಟ್ ಕ್ರಿಕೆಟ್ ಸೌಂದರ್ಯವನ್ನು ಕ್ರಿಕೆಟ್ ಪ್ರಿಯರಿಗೆ ಉಣಬಡಿಸಿತು. ಉತ್ತಮ ಪಿಚ್ ಸಿದ್ಧಪಡಿಸಿದ್ದಕ್ಕೆ ರಾಹುಲ್ ದ್ರಾವಿಡ್ ಅವರು ನಮ್ಮ groundsmenಗಳಿಗೆ ವೈಯಕ್ತಿಕವಾಗಿ ₹35 ಸಾವಿರ ನೀಡಿದ್ದಾರೆ ಎಂದು ನಾವು ಘೋಷಿಸಲು ಸಂತೋಷಿಸುತ್ತೇವೆ ಎಂದು ಉತ್ತರ ಪ್ರದೇಶ ಕ್ರಿಕೆಟ್ ಮಂಡಳಿ(UPCA) ಪಂದ್ಯ ಮುಗಿದ ಬಳಿಕ ತಿಳಿಸಿದೆ.
ತಮ್ಮ ವೃತ್ತಿ ಜೀವನದುದ್ದಕ್ಕೂ ಪ್ರಾಮಾಣಿಕ ಮತ್ತು ನೇರ ಆಟಕ್ಕೆ ಹೆಸರುವಾಸಿಯಾಗಿದ್ದ ರಾಹುಲ್ ದ್ರಾವಿಡ್, ಆಟದಿಂದ ತುಂಬಾ ವರ್ಷಗಳಿಂದ ದೂರ ಉಳಿದಿದ್ದರೂ ಅವರ ನಡತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಭಾರತದಲ್ಲಿ ಕಳೆದ ಕೆಲವು ಟೆಸ್ಟ್ ಪಂದ್ಯಗಳು 3 ದಿನಗಳೊಳಗೆ ಮುಗಿಯುತ್ತಿದ್ದವು.
ಆದರೆ, ಈ ಪಂದ್ಯದಲ್ಲಿ ಅತ್ಯುತ್ತಮ ಬದಲಾವಣೆಯಾಗಿದೆ. ಇನ್ನೂ ವಿಶೇಷವೆಂದರೆ ಸ್ಪಿನ್ ಬೌಲರ್ಗಳು 20 ವಿಕೆಟ್ ಪಡೆದರೆ, ವೇಗಿಗಳು 16 ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಸ್ನೇಹಿ ಪಿಚ್ನಲ್ಲೂ ಎರಡೂ ತಂಡದ ಬ್ಯಾಟರ್ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಇದಕ್ಕಾಗಿಯೇ ಮೈದಾನದ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚಿ ದ್ರಾವಿಡ್ ನಗದು ಬಹುಮಾನ ನೀಡಿದ್ದಾರೆ.
ಇದನ್ನೂ ಓದಿ:IND vs NZ 1st Test: ಭಾರತದ ಗೆಲುವಿಗೆ ತಡೆಯೊಡ್ಡಿದ ಭಾರತ ಮೂಲದ ಕ್ರಿಕೆಟಿಗರು