ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವುದು ಬೇಡ, ಅವರು ಈ ಹಿಂದೆ ಪಾಕಿಸ್ತಾನ ಕುರಿತು ಅವಹೇಳನಕಾರಿಯಾಗಿ , ಭಾರತದ ಪರವಾಗಿ ಮಾತನಾಡಿದ್ದಾರೆ ಎಂದು ಮಾಜಿ ವೇಗಿ ಸರ್ಫರಾಜ್ ನವಾಜ್ ಹೇಳಿದ್ದಾರೆ.
ಸರ್ಫರಾಜ್ ನವಾಜ್, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದಿದ್ದು, ಜಹೀರ್ ಅಬ್ಬಾಸ್ ಅಥವಾ ಮಜೀದ್ ಖಾನ್ ಅವರನ್ನು ಮುಂದಿನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ಮನವಿ ಮಾಡಿ, ರಮೀಜ್ ರಾಜಾ ಅವರ ವಿರುದ್ಧ ತಮ್ಮ ನಿಲುವು ಪ್ರತಿಪಾದಿಸಿದ್ದಾರೆ.
ಹಲವು ಮಾಧ್ಯಮಗಳಲ್ಲಿ ನೀವು ಎಹ್ಶಾನ್ ಮಣಿ ಜಾಗಕ್ಕೆ ರಮೀಜ್ ರಾಜಾ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ರವಾನೆಯಾಗುತ್ತಿದೆ. ಈ ವಿಷಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪೋಷಕರಾಗಿರುವ ನಿಮಗೆ ಯಾರನ್ನಾದರೂ ಪಿಸಿಬಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಹಕ್ಕಿದೆ ಎಂದು ಪತ್ರದಲ್ಲಿ ಲಂಡನ್ ಮೂಲದ ಸರ್ಫರಾಜ್ ಬರೆದಿದ್ದಾರೆ.
ಆದರೆ, ರಾಷ್ಟ್ರೀಯ ಸಂಸ್ಥೆಯ ಪೋಷಕರಾಗಿ, ನೀವು ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆತ ಯಾವ ಮನಸ್ಥಿತಿಯವನು ಎಂಬ ಅರಿವಿದ್ದರೆ ಒಳ್ಳೆಯದು. ಅವರು(ರಾಜಾ) ಭಾರತದ ಪರವಾಗಿ ಮಾತನಾಡುವ ವೇಳೆ ಪಾಕಿಸ್ತಾನದ ವಿರುದ್ಧ ಅತ್ಯಂತ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸರ್ಫರಾಜ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಐಸಿಸಿಯಲ್ಲಿ ಭಾರತೀಯ ಕ್ರಿಕೆಟ್ನ ಪ್ರಾಬಲ್ಯವನ್ನು ಒಪ್ಪಿಕೊಳ್ಳಬೇಕೆಂದು ರಮೀಜ್ ರಾಜಾ ನಾಚಿಕೆಯಿಲ್ಲದೇ ಮತ್ತು ನಿರ್ಧಯವಾಗಿ ಹೇಳಿದ್ದಾರೆ. ಆದರೆ, ಇದನ್ನು ಹಲವಾರು ಪಾಕಿಸ್ತಾನ ಕ್ರಿಕೆಟಿಗರು ವಿರೋಧಿಸಿದ್ದರು. ಜೊತೆಗೆ ಐಸಿಸಿಯಲ್ಲಿ ಏಕಸ್ವಾಮ್ಯದ ಮೂಲಕ ಕ್ರಿಕೆಟ್ ಜಗತ್ತನ್ನು ಆಳುವ ಭಾರತೀಯ ಪ್ರಾಬಲ್ಯವಾದಿ ಯೋಜನೆಯ ವಿರುದ್ಧ ಪಾಕಿಸ್ತಾನ ಹೋಗಬಾರದು ಎಂದು ಅವರು ಹೇಳಿದ್ದಾರೆ.
ಹಾಗಾಗಿ ನೀವೊಬ್ಬ ಗೌರವಾನ್ವಿತ ಕ್ರಿಕೆಟ್ ಪೋಷಕರಾಗಿ ಐಸಿಸಿ ಸದಸ್ಯರೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವ ಲೆಜೆಂಡ್ ಮಜೀದ್ ಖಾನ್ ಮತ್ತು ಮಾಜಿ ಐಸಿಸಿ ಪ್ರೆಸಿಡೆಂಟ್ ಆಗಿರುವ ಜಹೀರ್ ಅಬ್ಬಾಸ್ ಅವರನ್ನು ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರೆ ಉತ್ತಮ ಎಂದು ಸರ್ಫರಾಜ್ ತಿಳಿಸಿದ್ದಾರೆ.