ನವದೆಹಲಿ : ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಜುಲೈ 1 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಸುಮಾರು 12.5 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ. ಪ್ಲಾಟ್ಫಾರ್ಮ್ನಲ್ಲಿ ಕ್ರಿಕೆಟ್ ಕಂಟೆಂಟ್ ಇಲ್ಲವಾಗಿರುವುದರಿಂದ ಚಂದಾದಾರರು ದೂರವಾಗುತ್ತಿದ್ದಾರೆ. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕ ಸೇರಿದಂತೆ ಸತತ ಮೂರನೇ ತ್ರೈಮಾಸಿಕದಲ್ಲಿ ಡಿಸ್ನಿ+ ಹಾಟ್ಸ್ಟಾರ್ ಗಮನಾರ್ಹ ಸಂಖ್ಯೆಯ ಚಂದಾದಾರರನ್ನು ಕಳೆದುಕೊಂಡಿದೆ.
ಪ್ರಸಕ್ತ ತ್ರೈಮಾಸಿಕದಲ್ಲಿ ಇಂಟರ್ ನ್ಯಾಷನಲ್ಸ್ ಚಾನೆಲ್ಗಳ ಆದಾಯವು ಶೇಕಡಾ 20 ರಷ್ಟು ಇಳಿದು 1.2 ಬಿಲಿಯನ್ ಡಾಲರ್ಗೆ ತಲುಪಿದೆ ಮತ್ತು ಕಾರ್ಯಾಚರಣೆಯ ಆದಾಯಗಳು $ 166 ಮಿಲಿಯನ್ ಆದಾಯದಿಂದ $ 87 ಮಿಲಿಯನ್ ನಷ್ಟಕ್ಕೆ ಇಳಿದಿವೆ. ಡಿಸ್ನಿ+ ಹಾಟ್ ಸ್ಟಾರ್ ಜೂನ್ ಅಂತ್ಯದ ವೇಳೆಗೆ 40.4 ಮಿಲಿಯನ್ ಚಂದಾದಾರರನ್ನು ಹೊಂದಿತ್ತು. ಇದು ಕಳೆದ ವರ್ಷ ಅಕ್ಟೋಬರ್ಗೆ ಹೋಲಿಸಿದರೆ ಸುಮಾರು 21 ಮಿಲಿಯನ್ ಕಡಿಮೆಯಾಗಿದೆ. ಇಂಟರ್ ನ್ಯಾಷನಲ್ ಡಿಸ್ನಿ+ (ಡಿಸ್ನಿ+ ಹಾಟ್ಸ್ಟಾರ್ ಹೊರತುಪಡಿಸಿ) ಪಾವತಿಸಿದ ಚಂದಾದಾರರ ಸರಾಸರಿ ಮಾಸಿಕ ಆದಾಯವು $ 5.93 ರಿಂದ $ 6.01 ಕ್ಕೆ ಏರಿಕೆಯಾಗಿದೆ.
ಕಳೆದ ವರ್ಷ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಸ್ಟ್ರೀಮಿಂಗ್ ಹಕ್ಕುಗಳನ್ನು ಕಳೆದುಕೊಂಡ ನಂತರ ವಿಡಿಯೋ ಸ್ಟ್ರೀಮಿಂಗ್ ಸೇವೆಯಲ್ಲಿ ಚಂದಾದಾರರ ಕುಸಿತವಾಗಲಿದೆ ಎಂದು ಡಿಸ್ನಿ ಈ ಹಿಂದೆ ಹೇಳಿಕೊಂಡಿತ್ತು. ಡಿಸ್ನಿ+ ಹಾಟ್ ಸ್ಟಾರ್ನ ಚಂದಾದಾರರ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಈ ಪಂದ್ಯಾವಳಿಯು ಪ್ರಮುಖ ಪಾತ್ರ ವಹಿಸಿತ್ತು. ವಯಾಕಾಮ್-18 2023-2027ರ ಅವಧಿಯ ಐಪಿಎಲ್ ಪಂದ್ಯಾವಳಿಯ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಮತ್ತು ಇತ್ತೀಚೆಗೆ ಇಡೀ ಪಂದ್ಯಾವಳಿಯನ್ನು ಜಿಯೋ ಸಿನೆಮಾದಲ್ಲಿ ಉಚಿತವಾಗಿ ಪ್ರಸಾರ ಮಾಡಿತ್ತು.
ಈ ವರ್ಷದ ಆರಂಭದಲ್ಲಿ ಡಿಸ್ನಿ ಸುಮಾರು 7,000 ಉದ್ಯೋಗಿಗಳನ್ನು ಅಥವಾ ತನ್ನ ಜಾಗತಿಕ ಕಾರ್ಯಪಡೆಯ ಸುಮಾರು 3.6 ಪ್ರತಿಶತದಷ್ಟು ನೌಕರರನ್ನು ವಜಾಗೊಳಿಸಿತ್ತು. ಅಲ್ಲದೆ ಕ್ರೀಡೆಗೆ ಸಂಬಂಧಿಸಿದ ಕಂಟೆಂಟ್ ವೆಚ್ಚಗಳು ಮತ್ತು ವಿಷಯೇತರ ವೆಚ್ಚಗಳನ್ನು ಕಡಿತಗೊಳಿಸಿತ್ತು. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಈ ತ್ರೈಮಾಸಿಕದ ಕೊನೆಯಲ್ಲಿ ತನ್ನ ಸ್ಟ್ರೀಮಿಂಗ್ ಸೇವೆಗಳಾದ ಡಿಸ್ನಿ +, ಇಎಸ್ಪಿಎನ್+ ಮತ್ತು ಹುಲುಗಳಲ್ಲಿ ಸುಮಾರು 219.6 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಈ ಸೇವೆಗಳಿಗೆ ಹಿಂದಿನ ತ್ರೈಮಾಸಿಕದಲ್ಲಿ 231.3 ಮಿಲಿಯನ್ ಚಂದಾದಾರರಿದ್ದರು.
2018 ರಲ್ಲಿ ಮಾಧ್ಯಮ ಉದ್ಯಮಿ ರುಪರ್ಟ್ ಮುರ್ಡೋಕ್ ಅವರ 21st Century Fox ಕಂಪನಿಯನ್ನು ಡಿಸ್ನಿ ಸ್ವಾಧೀನಪಡಿಸಿಕೊಂಡಿತ್ತು. ಅದರ ಮೂಲಕ ಸ್ಟಾರ್ ಇಂಡಿಯಾ ಅದರ ತೆಕ್ಕೆಗೆ ಬಂದಿತ್ತು. ಸ್ಟಾರ್ ಇಂಡಿಯಾ (ಈಗ ಎರಡು ಮಾಧ್ಯಮ ಕಂಪನಿಗಳ ವಿಲೀನದ ನಂತರ ಡಿಸ್ನಿ ಸ್ಟಾರ್ ಎಂದು ಮರುನಾಮಕರಣ ಮಾಡಲಾಗಿದೆ) ಸ್ಟ್ರೀಮಿಂಗ್ ಅಪ್ಲಿಕೇಶನ್ ಡಿಸ್ನಿ + ಹಾಟ್ಸ್ಟಾರ್ ಅನ್ನು ಒಳಗೊಂಡಿದೆ. ಇತ್ತೀಚೆಗೆ, ವಾಲ್ಟ್ ಡಿಸ್ನಿ ತನ್ನ ಭಾರತದ ವ್ಯವಹಾರವನ್ನು ಮಾರಾಟ ಮಾಡುವ ಬಗ್ಗೆ ಮಾತುಕತೆಗಳು ನಡೆದಿವೆ.
ಇದನ್ನೂ ಓದಿ : Chandrayaan-3: ವಿಕ್ರಮ ಲ್ಯಾಂಡರ್ ಸೆರೆಹಿಡಿದ ಭೂಮಿ ಮತ್ತು ಚಂದ್ರನ ಚಿತ್ರ ಬಿಡುಗಡೆ ಮಾಡಿದ ಇಸ್ರೊ