ರಾಂಚಿ (ಜಾರ್ಖಂಡ್) : ಇಂದಿನಿಂದ (ಸೆಪ್ಟೆಂಬರ್ 29) ವಿಶ್ವಕಪ್ ಆರಂಭವಾಗಿದೆ ಎಂದೇ ಹೇಳಬಹುದು. ಏಕೆಂದರೆ ಪ್ರಮುಖ ಪಂದ್ಯಗಳಿಗೂ ಮುನ್ನ ತಂಡಗಳು ಮೈದಾನಕ್ಕಿಳಿದು ಅಭ್ಯಾಸ ಪಂದ್ಯಗಳನ್ನು ಆಡಲು ಇವತ್ತಿನಿಂದಲೇ ಪ್ರಾರಂಭಿಸಿವೆ. ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ಸರಣಿಯನ್ನು ಗೆದ್ದಿರುವ ಭಾರತ ತಂಡ ಸಂಪೂರ್ಣ ವಿಶ್ವದೊಂದಿಗೆ ಮೈದಾನಕ್ಕಿಳಿಯಲು ಸಜ್ಚಾಗಿದೆ. ಅದರ ಜೊತೆಗೆ ಭಾರತ ತಂಡ ಎಲ್ಲಾ ವಿಭಾಗದಲ್ಲಿ ಫಿಟ್ ಆಗಿ ಕಾಣುತ್ತಿದ್ದು, ತವರು ಮೈದಾನದ ಲಾಭ ಪಡೆದು 2011ರ ವಿಶ್ವಕಪ್ನ ಗಳಿಗೆಯನ್ನು ಮತ್ತೆ ಸೃಷ್ಠಿಸಲಿದೆ ಎಂದು ಅಭಿಮಾನಿಗಳು ಲೆಕ್ಕಹಾಕುತ್ತಿದ್ದಾರೆ.
ಅಕ್ಟೋಬರ್ 5 ರಿಂದ ಅಧಿಕೃತವಾಗಿ ವಿಶ್ವಕಪ್ಗೆ ಚಾಲನೆ ಸಿಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ತಂಡ ಇಂಗ್ಲೆಂಡ್ ರನ್ನರ್ ಅಪ್ ನ್ಯೂಜಿಲೆಂಡ್ ವಿರುದ್ಧ ಪ್ರಥಮ ಪಂದ್ಯವನ್ನು ಆಡಲಿದೆ. ಭಾರತ ವಿಶ್ವಕಪ್ನ ಮೊದಲ ಪಂದ್ಯವನ್ನು ಚೆನ್ನೈನ ಚೆಪಾಕ್ ಮೈದಾನದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ.
ತಜ್ಞರ ಪ್ರಕಾರ, ಈ ಬಾರಿ ತಂಡವು ಅತ್ಯಂತ ಸಮತೋಲಿತವಾಗಿದ್ದು, ತಂಡವು 2011ರ ವಿಶ್ವಕಪ್‌ನಂತೆಯೇ ಕಾಣುತ್ತಿದೆ. ಹೀಗಿರುವಾಗ ತಂಡದ ವಿಶೇಷತೆ ಬಗ್ಗೆ ಸ್ಪೆಷಲ್ ವ್ಯಕ್ತಿ ಒಬ್ಬರು ಮಾತನಾಡಿದ್ದಾರೆ. ಶಾಲಾ ಕ್ರಿಕೆಟ್ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿಯ ಪ್ರತಿಭೆಯನ್ನು ಗುರುತಿಸಿದ ಮತ್ತು ಧೋನಿ ಅವರಿಗೆ ಪ್ರತಿ ಹಂತದಲ್ಲೂ ಬೆಂಬಲ ಮತ್ತು ಧೈರ್ಯವನ್ನು ನೀಡಿದ ಚಂಚಲ್ ಭಟ್ಟಾಚಾರ್ಯ ಈಟಿವಿ ಭಾರತದ ಜೊತೆ ತಂಡದ ವಿಶೇಷತೆ ಬಗ್ಗೆ ಮಾತನಾಡಿದ್ದಾರೆ.
ರೋಹಿತ್ ನೇತೃತ್ವದ ತಂಡ ವಿಶ್ವಕಪ್ ಗೆಲ್ಲುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂದು ಕ್ರಿಕೆಟ್ ಅಭಿಮಾನಿ ಚಂಚಲ್ ಭಟ್ಟಾಚಾರ್ಯ ವಿಶ್ವಾಸದಿಂದ ಹೇಳಿದ್ದಾರೆ. ರೋಹಿತ್ ಶರ್ಮಾ ಕೂಡ ಅತ್ಯಂತ ನಿಷ್ಠಾವಂತ ನಾಯಕ ಎಂದು ಅವರು ಬಣ್ಣಿಸಿದ್ದಾರೆ. ಆದರೆ, ಎದುರಾಳಿ ತಂಡ ಏನು ಮಾಡಲಿದೆ ಎಂಬುದನ್ನು ಮೊದಲೇ ಯೋಚಿಸಬಲ್ಲ ಕೌಶಲ್ಯ ಧೋನಿಗಿತ್ತು. ಈ ಬಾರಿ ವಿರಾಟ್ ಕೊಹ್ಲಿಯಿಂದ ಸಾಕಷ್ಟು ನಿರೀಕ್ಷೆಗಳಿವೆ. ಶುಭ್‌ಮನ್ ಗಿಲ್ ಅವರನ್ನು ತುಂಬಾ ಹೊಗಳಿದ ಅವರು, ಈ ಹುಡುಗ ಖಂಡಿತವಾಗಿಯೂ ಏನಾದರೂ ಮಾಡುತ್ತಾನೆ ಎಂದು ಹೇಳಿದರು.
ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ 1983 ರಲ್ಲಿ ಅಂದಿನ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿರುವುದು ಭಾರತದ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿದೆ. ಆ ವಿಜಯವನ್ನು ಪುನರಾವರ್ತಿಸಲು 28 ವರ್ಷಗಳನ್ನು ತೆಗೆದುಕೊಂಡಿತು. ಮಹೇಂದ್ರ ಸಿಂಗ್ ಧೋನಿ ಆ ಕನಸನ್ನು ನನಸು ಮಾಡಿದ್ದರು.