ದುಬೈ : ನ್ಯೂಜಿಲ್ಯಾಂಡ್ ತಂಡದ ಬ್ಯಾಟರ್ ಡೆರಿಲ್ ಮಿಚೆಲ್ 2021ರ ಐಸಿಸಿ ವರ್ಷದ ಕ್ರೀಡಾ ಸ್ಫೂರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಬೌಲರ್ ಡಿಕ್ಕಿ ಹೊಡೆದ ಕಾರಣ ಅವಕಾಶವಿದ್ದರೂ ರನ್ ತೆಗೆದುಕೊಳ್ಳುವುದಕ್ಕೆ ಮುಂದಾಗದ ಅವರ ನಡೆಗೆ ಈ ಪ್ರಶಸ್ತಿ ನೀಡಲಾಗಿದೆ.
ಅಬುಧಾಬಿಯಲ್ಲಿ ನಡೆದಿದ್ದ 2021ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮೊಯೀನ್ ಅಲಿ ಅವರ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 166 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ 17 ಓವರ್ಗಳಲ್ಲಿ 133ಕ್ಕೆ4 ವಿಕೆಟ್ ಕಳೆದುಕೊಂಡಿತ್ತು.
ಈ ಸಂದರ್ಭದಲ್ಲಿ ರಶೀದ್ ಎಸೆದ 18ನೇ ಓವರ್ನ ಮೊದಲ ಎಸೆತದಲ್ಲಿ ಜಿಮ್ಮಿ ನೀಶಮ್ ಡೌನ್ ದಿ ಗ್ರೌಂಡ್ ಆಡಿದರು. ಅದು ಕಿವೀಸ್ಗೆ ಸುಲಭದ ಸಿಂಗಲ್ ರನ್ ಆಗಿತ್ತು. ಆದರೆ, ರಶೀದ್ ಚೆಂಡನ್ನು ತಡೆಯಲು ಮುಂದಾದಾಗ ಆಕಸ್ಮಿಕವಾಗಿ ರಶೀದ್ಗೆ ಮಿಚೆಲ್ ಅಡ್ಡ ಬಂದರು.
ಗೆಲ್ಲಲೇಬೇಕಾದ ಪಂದ್ಯದಲ್ಲಿ, ಅದರಲ್ಲೂ 18 ಎಸೆತಗಳಲ್ಲಿ 30ಕ್ಕೂ ಹೆಚ್ಚು ರನ್ಗಳ ಅಗತ್ಯವಿದ್ದ ಸಂದರ್ಭದಲ್ಲಿ ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿದ ಮಿಚೆಲ್, ಸ್ಟ್ರೈಕರ್ ನೀಶಮ್ರನ್ನು ವಾಪಸ್ ಕಳುಹಿಸಿದರು. ಅವರ ಈ ನಡೆ ಕ್ರಿಕೆಟ್ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಡೆರಿಲ್ ಮಿಚೆಲ್ ತೋರಿದ ಸನ್ನಡತೆಯೇ 2021ರ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಯನ್ನು ತಂದುಕೊಟ್ಟಿದೆ.
ಇದನ್ನೂ ಓದಿ:ಫಿಟ್‌ನೆಸ್ ಕೊರತೆ ಬಳಿಕ ಹೊಸ ಉತ್ಸಾಹದಲ್ಲಿ, ಹೊಸ ತಂಡದ ನಾಯಕನಾಗಿ ಕಣಕ್ಕಿಳಿಯಲಿರುವ ಹಾರ್ದಿಕ್ ಪಾಂಡ್ಯ!
"ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ಗೆ ಭಾಜನರಾಗಿರುವುದು ನನಗೆ ತುಂಬಾ ಖುಷಿಯಾಗುತ್ತಿದೆ. ಇದು ನ್ಯೂಜಿಲ್ಯಾಂಡಿಗನಾಗಿ ನಾವು ಹೆಮ್ಮೆ ಪಡುವ ವಿಷಯ. ನಾವು ಒಂದು ತಂಡವಾಗಿ ಕ್ರಿಕೆಟ್ ಆಡುವ ರೀತಿಯೇ ಸ್ಪಿರಿಟ್ ಆಫ್ ಕ್ರಿಕೆಟ್ ಆಗಿದೆ. ವೈಯಕ್ತಿಕವಾಗಿ, ನಾನು ಅದೇ ದಾರಿಯಲ್ಲಿದ್ದೇನೆ ಮತ್ತು ನಾವು ನಮ್ಮದೇ ಆದ ರೀತಿಯಲ್ಲಿ ಗೆಲ್ಲಲು ಬಯಸಿದ್ದೆವು. ಅಂತಹ ದೊಡ್ಡ ಪಂದ್ಯದಲ್ಲಿ ವಿವಾದ ಉಂಟು ಮಾಡುವುದು ಸರಿಯಲ್ಲ ಎಂದು ನಾನು ಭಾವಿಸಿದೆ" ಎಂದು ಐಸಿಸಿ ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಿಚೆಲ್ ತಿಳಿಸಿದ್ದಾರೆ.
ಡೆರಿಲ್ ಮಿಚೆಲ್ ಈ ಪ್ರಶಸ್ತಿ ಪಡೆದ 4ನೇ ಕಿವೀಸ್ ಕ್ರಿಕೆಟಿಗನಾಗಿದ್ದಾರೆ. ಈ ಹಿಂದೆ ಡೇನಿಯಲ್ ವಿಟೋರಿ, ಬ್ರೆಂಡನ್ ಮೆಕಲಮ್ ಮತ್ತು ಕೇನ್ ವಿಲಿಯಮ್ಸನ್ ಈ ಪ್ರಶಸ್ತಿ ಪಡೆದಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ