ಕರಾಚಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವುದು ತುಂಬಾ ಸುಲಭ, ಅವರು ಎಡಗೈ ಸ್ವಿಂಗ್ ಬೌಲರ್ಗಳಿಗೆ ಆಡಲು ಪರದಾಡುತ್ತಾರೆ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ಮಾಜಿ ಬೌಲರ್ ಮೊಹಮ್ಮದ್ ಅಮೀರ್ ವಿರುದ್ಧ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ ಕಿಡಿ ಕಾರಿದ್ದಾರೆ.
ಮೊಹಮ್ಮದ್ ಅಮೀರ್, ನೀವು ಪ್ರಚಾರಪ್ರಿಯ ಎನ್ನುವುದರಲ್ಲಿ ಅನುಮಾನವಿಲ್ಲ. ನೀವು ಪಾಕಿಸ್ತಾನಕ್ಕೆ ನಿಸ್ಸಂದೇಹವಾಗಿ ಅದ್ಭುತ ಬೌಲರ್ ಆಗಿದ್ದೀರಿ. ನೀವು ಪದಾರ್ಪಣೆ ಮಾಡಿದಾಗಿನಿಂದ ನೀವಾಗಿಯೇ ಹೆಸರು ಮಾಡಿಕೊಂಡದ್ದೀರಾ. ನೀವು ಹೊಸ ಚೆಂಡಿನಲ್ಲಿ ಎರಡು ರೀತಿಯಲ್ಲಿ ಸ್ವಿಂಗ್ ಮಾಡುತ್ತೀರಾ. ಅನೇಕ ಬ್ಯಾಟ್ಸ್ಮನ್ಗಳಿಗೆ ತೊಂದರೆ ನೀಡಿದ್ದೀರಾ, 2017ರ ಚಾಂಪಿಯನ್ ಟ್ರೋಫಿಯಲ್ಲೂ ಭಾರತೀಯ ಬ್ಯಾಟ್ಸ್ಮನ್ಗಳ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ್ದೀರಾ. ಆದರೆ ಯಾವಾಗ ನಿಮಗೆ ಈ ಬಗ್ಗೆ ಅನುಮಾನ ಬರುತ್ತದೋ ಆಗ ನೀನು ಪ್ರಚಾರ ಮಾಡಿಕೊಳ್ಳುತ್ತೀಯ ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕನೇರಿಯಾ ಹೇಳಿದ್ದಾರೆ.
ಈ ರೀತಿಯ ಹೇಳಿಕೆಗಳನ್ನು ಮುಂಬರುವ ಸರಣಿ ಅಥವಾ ಎರಡು ತಂಡಗಳು ಮುಖಾಮುಖಿಯಾಗಲಿದ್ದೇವೆ ಎನ್ನುವ ಸಂದರ್ಭದಲ್ಲಿ ಹೇಳುತ್ತಾರೆ. ಆದರೆ ನಾವು ಭಾರತ vs ಪಾಕಿಸ್ತಾನ ಸರಣಿಯನ್ನು ಆಡಲು ಹೋಗುವುದಿಲ್ಲ, ಅಥವಾ ನೀವು ರೋಹಿತ್ ಶರ್ಮಾ ಅವರಿಗೆ ಬೌಲಿಂಗ್ ಮಾಡಲು ಹೋಗುವುದಿಲ್ಲ. ಆದರೂ ನೀವು ಹಿಂದೆ ಅಬ್ಧುಲ್ ರಜಾಕ್ ಜಸ್ಪ್ರೀತ್ ಬುಮ್ರಾ ವಿರುದ್ಧ ಹೇಳಿಕೆ ನೀಡಿದಂತೆ ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದೀರಾ ಎಂದು ಕನೇರಿಯಾ ಅಸಮಧಾನ ಹೊರ ಹಾಕಿದ್ದಾರೆ.
ರೋಹಿತ್ ಶರ್ಮಾ ಈಗಾಗಲೇ ಅನೇಕ ದ್ವಿಶತಕ ಬಾರಿಸಿದ್ದಾರೆ. ಅವರು ರನ್ ಮಷಿನ್ ಆಗಿದ್ದಾರೆ. ಅವರಿಗಿಂತ ಸ್ಪಿನ್ನರ್ ಅಥವಾ ವೇಗದ ಬೌಲರ್ಗಳಿಗೆ ಉತ್ತಮವಾಗಿ ಆಡುವ ಬ್ಯಾಟ್ಸ್ಮನ್ ಇಲ್ಲ. ನೀವು ಕಳೆದ ಎರಡು ವರ್ಷಗಳಿಂದ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದೀರಾ, ನಿಮ್ಮ ದೀರ್ಘಕಾಲ ಸ್ವಿಂಗ್ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ತಂಡದಿಂದ ಹೊರಹಾಕಲಾಗಿದೆ ಎಂದು ಅಮೀರ್ಗೆ ತಿರುಗೇಟು ನೀಡಿದ್ದಾರೆ.