ಕರಾಚಿ: ಪಾಕಿಸ್ತಾನದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಅವಕಾಶಗಳನ್ನು ಕೈಚೆಲ್ಲಿಕೊಂಡಿದ್ದ ಆಸ್ಟ್ರೇಲಿಯಾ ಇದೀಗ ತಂಡಕ್ಕೆ ಆದ ಹಿನ್ನಡೆ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳುತ್ತಿದೆ. ತಂಡವು ಐದು ಕ್ಯಾಚ್‌ಗಳನ್ನು ಬಿಟ್ಟಿದ್ದೇ ಪಂದ್ಯವನ್ನು ಪಾಕ್ ಡ್ರಾ ಮಾಡಿಕೊಂಡು ಸೋಲಿನಿಂದ ಪಾರಾಗಾಲು ಅವಕಾಶ ಮಾಡಿಕೊಟ್ಟಂತಾಯ್ತು ಎಂದು ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ, ಕೆಲ ಕ್ರಿಕೆಟ್ ತಜ್ಞರು ಕಮ್ಮಿನ್ಸ್ ಅವರ ತಂತ್ರಗಾರಿಕೆಗಳನ್ನು ಪ್ರಶ್ನಿಸಿದ್ದು, 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ಫಾಲೋ ಅಪ್ ಹೇರದಿರುವುದು, ಬ್ಯಾಟಿಂಗ್ ಮುಂದುವರಿಸದಿರುವುದನ್ನ ಪ್ರಶ್ನಿಸಿದ್ದಾರೆ. ಆದರೆ, ನಾಯಕ ಮಾತ್ರ ಐದು ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದರೆ ವಿಷಯ ಬೇರೆಯೇ ಆಗುತ್ತಿತ್ತು ಎಂದಿದ್ದಾರೆ. ನಾವು ಇಲ್ಲಿ ಉತ್ತಮವಾಗಿ ಹೊಂದಿಕೊಳ್ಳಲು ಮತ್ತು ಆಡಲು ಸಮರ್ಥರಾಗಿದ್ದೇವೆ ಎಂಬುದನ್ನ ತೋರಿಸುತ್ತಿದ್ದೇವೆ. ಆದರೆ, ಫಲಿತಾಂಶದೊಂದಿಗೆ ಹೊರಬರದಿರುವುದು ತಪ್ಪಿದ ಅವಕಾಶ ಎಂದು ಭಾವಿಸಬಹುದು. ಒಳ್ಳೆಯ ವಿಷಯವೆಂದರೆ ಈ ಪಂದ್ಯ ಶೂನ್ಯವಾಗಿದೆ. ನಾವು ಏನನ್ನೂ ಕಳೆದುಕೊಂಡಿಲ್ಲ, ಮುಂದಿನ ವಾರ ಮತ್ತೊಂದು ಆಟವಿದೆ ಎಂದು ಹೇಳಿದರು.
ಬುಧವಾರ ಮುಕ್ತಾಯವಾದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ರೋಚಕ ಡ್ರಾ ಸಾಧಿಸುವ ಮೂಲಕ ಪಾಕಿಸ್ತಾನದ ಬ್ಯಾಟರ್‌ಗಳಾದ ಬಾಬರ್ ಅಜಮ್, ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದರು. ಗೆಲುವಿಗೆ ಬರೋಬ್ಬರಿ 506 ರನ್‌ಗಳ ಬೃಹತ್ ಗುರಿ ಪಡೆದಿದ್ದ ಪಾಕ್ ಪರ ನಾಯಕ ಬಾಬರ್ ಅಜಮ್ ಅಮೋಘ 196 ರನ್ ಬಾರಿಸಿದರು, ಶಫೀಕ್ 96 ರನ್ ಗಳಿಸಿದರೆ, ರಿಜ್ವಾನ್ ಶತಕ (104) ಗಳಿಸಿ ಅಜೇಯರಾಗಿ ಉಳಿಯುವ ಮೂಲಕ ಡ್ರಾ ಸಾಧಿಸಿದರು.
4ನೇ ದಿನದಾಟದಲ್ಲಿ ಸ್ಟೀವ್ ಸ್ಮಿತ್ ಸ್ಲಿಪ್‌ನಲ್ಲಿ ಅಬ್ದುಲ್ಲಾ ಶಫೀಕ್ ಅವರ ಕ್ಯಾಚ್ ಬಿಟ್ಟರೆ, ಉಸ್ಮಾನ್ ಖವಾಜಾ ಶಾರ್ಟ್ ಕವರ್‌ನಲ್ಲಿ ರಿಜ್ವಾನ್ ಅವರ ನೇರವಾದ ಕ್ಯಾಚ್ ಅವನ್ನು ಕೈಚಲ್ಲಿದರು. ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲ್ಯಾಬುಸ್‌ಚಾಗ್ನೆ ಬಾಬರ್ ಅಜಮ್ ಕ್ಯಾಚ್ ಬಿಟ್ಟಿದ್ದು ಆಸೀಸ್‌ಗೆ ದುಬಾರಿ ಎನಿಸಿತು. ಇದೇ 21 ರಿಂದ ಲಾಹೋರ್‌ನಲ್ಲಿ ಬೆನೌಡ್-ಖಾದಿರ್ ಟ್ರೋಫಿಯ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾದ ಟೆಸ್ಟ್ ಗೆಲುವಿಗೆ ಮುಳ್ಳಾದ ಕಮಿನ್ಸ್ ಮೂರ್ಖ ನಿರ್ಧಾರ: ಬಾಬರ್-ರಿಜ್ವಾನ್ ಬೊಂಬಾಟ್ ಆಟ