ಹೈದರಾಬಾದ್: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಅಕ್ಟೋಬರ್ 5ರಂದು ಅಹಮದಾಬಾದ್‌ನಲ್ಲಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್-ನ್ಯೂಜಿಲೆಂಡ್ ಸೆಣಸಲಿವೆ. ಕ್ರಿಕೆಟ್ ಅಭಿಮಾನಿಗಳ ಜೊತೆಗೆ ಆಟಗಾರರು ಸಹ ಪಂದ್ಯಾವಳಿಯ ಆರಂಭಕ್ಕೆ ಉತ್ಸುಕರಾಗಿದ್ದಾರೆ. ಎಲ್ಲಾ ತಂಡಗಳು ವಿಶ್ವಕಪ್ 2023ಗಾಗಿ ಸಂಪೂರ್ಣವಾಗಿ ಸಿದ್ಧವಾಗಿವೆ. ಈ ವಿಶ್ವಕಪ್‌ನಲ್ಲಿ ಯುವ ಆಟಗಾರರು ವಿವಿಧ ತಂಡಗಳಲ್ಲಿ ಭಾಗವಹಿಸುತ್ತಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೇ ವಿಶ್ವಕಪ್‌ಗೆ ಆಯ್ಕೆಯಾಗಿರುವ ಐದು ಕಿರಿಯ ಆಟಗಾರರ ಬಗ್ಗೆ ತಿಳಿಯೋಣ.
ನೂರ್ ಅಹಮದ್: ಕಿರಿಯ ಆಟಗಾರರಲ್ಲಿ ಮೊದಲ ಹೆಸರು ಅಫ್ಘಾನಿಸ್ತಾನದ ಎಡಗೈ ಸ್ಪಿನ್ನರ್ ನೂರ್ ಅಹ್ಮದ್. ವಯಸ್ಸು 18 ವರ್ಷ 253 ದಿನಗಳು. 2023ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ತಂಡದಲ್ಲಿ ಉತ್ತಮ ಪ್ರದರ್ಶನದಿಂದ ಇವರು ಬೆಳಕಿಗೆ ಬಂದರು. ನೂರ್ ವಿವಿಧ ದೇಶಗಳಲ್ಲಿ ನಡೆಯುವ ಲೀಗ್ ಕ್ರಿಕೆಟ್ನಲ್ಲಿ ಭಾಗವಹಿಸಿದ್ದಾರೆ. 3 ಏಕದಿನ ಹಾಗೂ ಒಂದು ಟಿ20ಯಲ್ಲಿ 6 ವಿಕೆಟ್ ಕಬಳಿಸಿದ್ದಾರೆ. ಅಫ್ಘಾನಿಸ್ತಾನದ ಸ್ಟಾರ್ ಬೌಲರ್ಗಳಾಗಿ ನೂರ್ ಅಹ್ಮದ್ ಮತ್ತು ರಶೀದ್ ಖಾನ್ 2023ರ ವಿಶ್ವಕಪ್‌ನಲ್ಲಿ ಆಡಲಿದ್ದಾರೆ. ಇಬ್ಬರು ಆಟಗಾರರಿಗೆ ಐಪಿಎಲ್ ಆಟದ ಅನುಭವದಿಂದ ಭಾರತ ಪಿಚ್ಗಳ ಪರಿಚಯವಿದೆ. ಹೀಗಾಗಿ ಅಫ್ಘನ್ ಪರ ಈ ಜೋಡಿ ಎದುರಾಳಿಗಳಿಗೆ ಬೆದರಿಕೆಯೊಡ್ಡಬಹುದು.
ಆರ್ಯನ್ ದತ್: ಆರ್ಯನ್ ದತ್ ಐಸಿಸಿ ವಿಶ್ವಕಪ್ 2023ರಲ್ಲಿ ಆಡುವ ಎರಡನೇ ಯುವ ವೇಗಿ. ನೆದರ್ಲೆಂಡ್ಸ್‌ನ ಎಡಗೈ ಸೀಮರ್‌ಗೆ 20 ವರ್ಷ ಮತ್ತು 118 ದಿನಗಳಾಗಿವೆ. 2021ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯ ಆಡಿದರು. 25 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಿದ್ದಾರೆ. 25 ಒನ್ಡೇಯಿಂದ 5.17 ಎಕಾನಮಿಯಲ್ಲಿ 20 ವಿಕೆಟ್‌ಗಳನ್ನು ಪಡೆದರೆ, 965 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಏಕದಿನದಲ್ಲಿ 31 ರನ್‌ಗಳಿಗೆ 3 ವಿಕೆಟ್ ಕಬಳಿಸಿರುವುದು ಇವರ ಅತ್ಯುತ್ತಮ ಪ್ರದರ್ಶನ.
ರಿಯಾಜ್ ಹಸನ್: ಮುಂಬರುವ ವಿಶ್ವಕಪ್‌ನಲ್ಲಿ ಆಡಲಿರುವ ಕಿರಿಯ ಆಟಗಾರರ ಪೈಕಿ ಅಫ್ಘಾನಿಸ್ತಾನದ ರಿಯಾಜ್ ಹಸನ್ ಮೂರನೇ ಸ್ಥಾನದಲ್ಲಿದ್ದಾರೆ. ವಯಸ್ಸು 20 ವರ್ಷ 310 ದಿನಗಳು. ರಿಯಾಜ್ ಬಲಗೈ ಬ್ಯಾಟರ್ ಆಗಿದ್ದು, ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ. ಜನವರಿ 2022ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯ ಆಡಿದರು. 4 ಏಕದಿನಗಳನ್ನು ಆಡಿದ್ದು, 68ರ ಸ್ಟ್ರೈಕ್ ರೇಟ್ನಲ್ಲಿ 30ರ ಸರಾಸರಿಯಿಂದ 120 ರನ್ ಗಳಿಸಿದ್ದಾರೆ. ಇವರ ಬ್ಯಾಟ್ನಿಂದ ಒಂದು ಅರ್ಧಶತಕ ದಾಖಲಾಗಿದೆ. ಆಫ್ಘಾನಿಸ್ತಾನಕ್ಕೆ ಈ ಆಟಗಾರನ ಮೇಲೆ ದೊಡ್ಡ ಇನ್ನಿಂಗ್ಸ್ ಕಟ್ಟುವ ಭರವಸೆ ಇದೆ.
ತಂಝೀಮ್ ಹಸನ್ ಸಾಕಿಬ್: ಬಾಂಗ್ಲಾದೇಶದ ಬಲಗೈ ವೇಗಿ ತಂಜಿಮ್ ಹಸನ್ ಮುಂಬರುವ ಐಸಿಸಿ ವಿಶ್ವಕಪ್ 2023ರಲ್ಲಿ ಆಡುವ ನಾಲ್ಕನೇ ಕಿರಿಯ ಕ್ರಿಕೆಟಿಗ. ವಯಸ್ಸು 20 ವರ್ಷ 341 ದಿನಗಳು. ಸಾಕಿಬ್ ಎರಡು ಏಕದಿನ ಪಂದ್ಯಗಳನ್ನು ಆಡಿದ್ದು, 57 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದಿದ್ದಾರೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
ವಿಕ್ರಮ್ ಜೀತ್ ಸಿಂಗ್: 20 ವರ್ಷ 342 ದಿನ ವಯಸ್ಸಿನ ವಿಕ್ರಮ್ ಜೀತ್ ಸಿಂಗ್ ನೆದರ್ಲೆಂಡ್ಸ್‌ನ ಬಲಗೈ ಬ್ಯಾಟರ್. ಭಾರತೀಯ ಮೂಲದ ವಿಕ್ರಮ್ ಜೀತ್ ಸಿಂಗ್ 25 ಏಕದಿನ ಪಂದ್ಯಗಳಲ್ಲಿ 32.32 ಸರಾಸರಿಯಲ್ಲಿ 808 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. ವಿಕ್ರಮ್ ಜೀತ್ ಸಿಂಗ್ ಹುಟ್ಟಿದ್ದು ಪಂಜಾಬ್ನಲ್ಲಿ. ಏಳನೇ ವಯಸ್ಸಿನಲ್ಲಿ, ತಮ್ಮ ಹೆತ್ತವರೊಂದಿಗೆ ನೆದರ್ಲ್ಯಾಂಡ್ಸ್ಗೆ ಹೋಗಿ ನೆಲೆಸಿದ್ದರು.
ಮೇಲಿನ ಎಲ್ಲಾ ಐದು ಆಟಗಾರರು ವಿಶ್ವಕಪ್‌ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಯುವ ಆಟಗಾರರ ಮೇಲೆ ಆಯಾ ದೇಶೀಯ ಅಭಿಮಾನಿಗಳು ಕಣ್ಣಿಟ್ಟಿರುವುದಲ್ಲದೇ, ಲೀಗ್ ಕ್ರಿಕೆಟ್ ಎಲ್ಲಾ ದೇಶದಲ್ಲೂ ಪ್ರಾಮುಖ್ಯತೆ ಪಡೆಯುತ್ತಿರುವುದರಿಂದ ಫ್ರಾಂಚೈಸಿಗಳು ಈ ಆಟಗಾರರ ಮೇಲೆ ಚಿತ್ತ ನೆಟ್ಟಿವೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಭಾರತ ತಂಡ ಪ್ರತಿನಿಧಿಸಿದ ಕನ್ನಡಿಗರು ಯಾರೆಲ್ಲಾ? ಸಂಪೂರ್ಣ ಮಾಹಿತಿ..