ಬರ್ಮಿಂಗ್ಹ್ಯಾಮ್: ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಪ್ರಸಕ್ತ ವರ್ಷದ ಏಕದಿನ ಕ್ರಿಕೆಟ್ನಲ್ಲಿ 1000 ರನ್ ಗಳಿಸಿದ ಸಾಧನೆಗೆ ಪಾತ್ರರಾಗಿದ್ದಾರೆ.
ಬಾಂಗ್ಲಾ ವಿರುದ್ಧ 26 ರನ್ ಗಳಿಸುವ ಮೂಲಕ ವಿರಾಟ್ ಈ ಸಾಧನೆ ಮಾಡಿದರು. ಹಾಗೆಯೇ ರೋಹಿತ್ ಶರ್ಮಾ ಕೂಡ ಈ ಪಂದ್ಯದಲ್ಲಿ ಶತಕ (104) ಗಳಿಸಿದ್ದಲ್ಲದೆ, 1000 ರನ್ ಗಡಿ ದಾಟಿದರು. ವಿರಾಟ್ ಕೊಹ್ಲಿ ಕೇವಲ 18 ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. 59.76ರ ಸರಾಸರಿಯಲ್ಲಿ 95.13ರ ಸ್ಟ್ರೈಕ್ ರೇಟ್ನಂತೆ ಕೊಹ್ಲಿ ರನ್ ಕಲೆಹಾಕಿದ್ದಾರೆ. ಅಲ್ಲದೆ ಸತತ ಮೂರನೇ ವರ್ಷ ಈ ಸಾಧನೆಗೆ ಪಾತ್ರರಾದರು.
ಹಾಗೆಯೇ ಉಪ ನಾಯಕ ರೋಹಿತ್ ಶರ್ಮಾ ಕೂಡ ಸತತ ನಾಲ್ಕನೇ ಬಾರಿ 1000 ರನ್ ಗಡಿ ತಲುಪಿದ್ದಾರೆ. ವಿಶ್ವಕಪ್ನಲ್ಲಿ 4ನೇ ಶತಕ ದಾಖಲಿಸಿದ ರೋಹಿತ್, ಒಟ್ಟಾರೆ ಈ ವರ್ಷ 1100 ರನ್ ಗಳಿಸಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ (1138) ಹಾಗೂ ಆಸೀಸ್ನ ಮತ್ತೋರ್ವ ಆಟಗಾರ ಉಸ್ಮಾನ್ ಖವಾಜಾ ಕೂಡ (1067) ಸಾವಿರ ರನ್ ಸಾಧನೆಗೈದ ಇತರ ಇಬ್ಬರು ಆಟಗಾರರಾಗಿದ್ದಾರೆ.