ಲಾರ್ಡ್ಸ್: ವಿಶ್ವಕಪ್ ಟೂರ್ನಿಯ ಮತ್ತೊಂದು ಮಹಾಸಮರಕ್ಕೆ 'ಕ್ರಿಕೆಟ್ ಕಾಶಿ' ಲಾರ್ಡ್ಸ್ ಸಜ್ಜಾಗಿದೆ. ಇಂದಿನ ಪಂದ್ಯದಲ್ಲಿ ಟೂರ್ನಿಯ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗುತ್ತಿವೆ.
ಅಂಕಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಆಸೀಸ್ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಅತ್ಯಂತ ರೋಚಕತೆ ಯಿಂದ ಕೂಡಿರಲಿದೆ ಎಂದೇ ಹೇಳಲಾಗುತ್ತಿದೆ.
ಎರಡೂ ತಂಡಗಳೂ ಟೂರ್ನಿಯಲ್ಲಿ ತಲಾ ಆರು ಪಂದ್ಯಗಳನ್ನಾಡಿವೆ. ಆಸ್ಟ್ರೇಲಿಯಾ ಐದು ಗೆಲುವು ಹಾಗೂ ಒಂದು ಪಂದ್ಯ ಸೋತಿದ್ದರೆ, ಇಂಗ್ಲೆಂಡ್ ನಾಲ್ಕು ಗೆಲುವು ಎರಡು ಪಂದ್ಯದಲ್ಲಿ ಸೋಲನುಭವಿಸಿದೆ. ಆಸ್ಟ್ರೇಲಿಯಾ ಹತ್ತು ಅಂಕಗಳೊಂದಿಗೆ ಬಹುತೇಕ ಸೆಮೀಸ್ನತ್ತ ದೃಷ್ಟಿ ನೆಟ್ಟಿದ್ದರೆ ಅತ್ತ ಇಂಗ್ಲೆಂಡ್ ಎಂಟು ಅಂಕ ಗಳಿಸಿದ್ದು ಮುಂದಿನ ಹಂತಕ್ಕೇರಲು ಉಳಿದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಆರಂಭಿಕ ಆಟಗಾರ ಜೇಸನ್ ರಾಯ್ ಅಲಭ್ಯತೆ ಇಂಗ್ಲೆಂಡ್ ತಂಡಕ್ಕೆ ತಲೆನೋವಾಗಿದೆ. ಮಾರ್ಕ್ವುಡ್ಗೆ ವಿಶ್ರಾಂತಿ ನೀಡಿ ಲಿಯಾಮ್ ಪ್ಲಂಕೆಟ್ ಆಡುವ 11 ರ ಬಳಗ ಸೇರಿಕೊಳ್ಳುವ ಸಾಧ್ಯತೆ ಇದೆ.
ಆಸೀಸ್ ತಂಡದಲ್ಲಿ ಆ್ಯಡಂ ಜಂಪಾರನ್ನು ಹೊರಗಿರಿಸಿ ನಥನ್ ಲಯಾನ್ರನ್ನು ಮೈದಾನಕ್ಕಿಳಿಸುವ ಸಾಧ್ಯತೆ ಇದೆ. ವೇಗಿಗಳಲ್ಲಿ ಬೆಹ್ರೆನ್ಡಾರ್ಫ್ ಬದಲಿಗೆ ಕೌಲ್ಟರ್ ನೈಲ್ ಟೀಮ್ ಸೇರ್ಪಡೆಯಾದರೆ ಅಚ್ಚರಿಯಿಲ್ಲ.
ಹೇಗಿದೆ ಕ್ರಿಕೆಟ್ ಕಾಶಿ ಪಿಚ್?
1975ರ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಕಲೆಹಾಕಿದ್ದ 334 ರನ್ ಈ ಮೈದಾನದ ಗರಿಷ್ಠ ಗಳಿಕೆಯಾಗಿದೆ. ಈ ಮೈದಾನದಲ್ಲಿ ಭಾರಿ ರನ್ ನಿರೀಕ್ಷೆ ಮಾಡದಿದ್ದರೂ 300ರ ಗಡಿ ದಾಟುವುದು ಪಕ್ಕಾ ಎನ್ನುತ್ತಾರೆ ಕ್ರಿಕೆಟ್ ಪಂಡಿತರು. ಎರಡೂ ತಂಡಗಳು ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವುದರಿಂದ ಎಲ್ಲ ಅಂಕಿ-ಅಂಶಗಳು ಉಲ್ಟಾ ಆದರೆ ಅಚ್ಚರಿಯಿಲ್ಲ.
ಸಂಭಾವ್ಯ ಇಂಗ್ಲೆಂಡ್ ತಂಡ:
ಇಯಾನ್ ಮಾರ್ಗನ್(ನಾಯಕ), ಜಾಸ್ ಬಟ್ಲರ್, ಜೇಮ್ಸ್ ವಿನ್ಸ್, ಜಾನಿ ಬೇರ್ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಅದಿಲ್ ರಶೀದ್, ಜೋಫ್ರಾ ಅರ್ಚರ್, ಮಾರ್ಕ್ ವುಡ್, ಲಿಯಾಮ್ ಪ್ಲಂಕೆಟ್, ಟಾಮ್ ಕರನ್, ಲಿಯಾಮ್ ಡಾಸನ್
ಆಸ್ಟ್ರೇಲಿಯಾ ಸಂಭಾವ್ಯ ತಂಡ:
ಆ್ಯರನ್ ಫಿಂಚ್(ನಾಯಕ), ಅಲೆಕ್ಸ್ ಕ್ಯಾರಿ, ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯ್ನಿಸ್, ನಥನ್ ಕೌಲ್ಟರ್ ನೈಲ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಮ್ ಜಂಪಾ, ಶಾನ್ ಮಾರ್ಶ್, ಕೇನ್ ರಿಚರ್ಡ್ಸನ್, ಜೇಸನ್ ಬೆಹ್ರೆನ್ಡಾರ್ಫ್, ನಥನ್ ಲಯಾನ್