ಲಂಡನ್: ಐಪಿಎಲ್ ಟೂರ್ನಿಯಲ್ಲಿ ದಾಖಲೆ ಪ್ರಮಾಣದಲ್ಲಿ ವೀಕ್ಷಕರನ್ನು ಸೆಳೆದಿದ್ದ ಹಾಟ್ಸ್ಟಾರ್, ಇದೀಗ ವಿಶ್ವಕಪ್ ಟೂರ್ನಮೆಂಟ್ನ ಮೊದಲ ಸೆಮಿಫೈನಲ್ನಲ್ಲಿ ಭಾರಿ ಸಂಖ್ಯೆಯಲ್ಲಿ ನೋಡುಗರನ್ನು ಪಡೆಯುವಲ್ಲಿ ಸಫಲವಾಗಿದೆ.
ನ್ಯೂಜಿಲ್ಯಾಂಡ್ ನೀಡಿದ 240 ರನ್ಗಳ ಗುರಿ ಬೆನ್ನತ್ತಿದ ಕೊಹ್ಲಿ ಬಳಗ ಆರಂಭಿಕ ಕುಸಿತ ಕಂಡಿತ್ತು. ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ಕೊನೆಯ ಹಂತದಲ್ಲಿ ಗೆಲುವಿನ ಆಸೆ ಚಿಗುರಿಸಿದ್ದರು. 44ರಿಂದ 47ನೇ ಓವರ್ನ ವೇಳೆ ಹಾಟ್ಸ್ಟಾರ್ನಲ್ಲಿ ನೋಡುಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.
44ನೇ ಓವರ್ ವೇಳೆ 1 ಕೋಟಿ 80 ಲಕ್ಷ ಇದ್ದ ವೀಕ್ಷಕರ ಸಂಖ್ಯೆ 47ನೇ ಓವರ್ ವೇಳೆ 2 ಕೋಟಿ 50 ಲಕ್ಷಕ್ಕೆ ಏರಿಕೆಯಾಗಿದೆ. ಜಡೇಜಾ ಔಟ್ ಆದ ಬಳಿಕವೂ ಧೋನಿ ಕ್ರೀಸ್ನಲ್ಲಿದ್ದ ಕಾರಣ ನೋಡುಗರಲ್ಲಿ ಗೆಲುವಿನ ಆಸೆ ಕಮರಿರಲಿಲ್ಲ. ಹೀಗಾಗಿ ಪ್ರತಿ ಸೆಕೆಂಡ್ ನೋಡುಗರ ಸಂಖ್ಯೆ ಲಕ್ಷದಲ್ಲಿ ಏರಿಕೆ ಕಂಡಿದೆ.
ಇಂಡೋ-ಪಾಕ್ ದಾಖಲೆ ಪತನ!
ಇದೇ ಹಾಟ್ಸ್ಟಾರ್ನಲ್ಲಿ ಜೂನ್ 16ರಂದು ಭಾರತ- ಪಾಕಿಸ್ತಾನ ನಡುವಿನ ಪಂದ್ಯವನ್ನು ಒಂದೂವರೆ ಕೋಟಿ ನೋಡುಗರು ಕಣ್ತುಂಬಿಕೊಂಡಿದ್ದರು. ಆದರೆ ಸೆಮೀಸ್ ಪಂದ್ಯದ ವೇಳೆ ಈ ದಾಖಲೆ ಪತನವಾಗಿದೆ.