ಮ್ಯಾಂಚೆಸ್ಟರ್ : ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್ ಆ್ಯಡಂ ಜಂಪಾ ಆರ್ಸಿಬಿ ತಂಡದಲ್ಲಿ ಯಜುವೇಂದ್ರ ಚಹಲ್ ಜೊತೆ ಪಾಲುದಾರರಾಗಲು ಬಯಸಿದ್ದಾರೆ. ಜತೆಗೆ ಆರ್ಸಿಬಿ ಪರ ಆಡುವಾಗ ಡೆತ್ ಬೌಲಿಂಗ್ ಕಲೆ ಕರಗತ ಮಾಡಿಕೊಳ್ಳಬೇಕೆಂದು ಆಶಿಸಿದ್ದಾರೆ.
ಜಂಪಾ ಹಾಗೂ ಚಹಾಲ್ ಇಬ್ಬರು ರಿಸ್ಟ್ ಸ್ಪಿನ್ನರ್ ಆಗಿದ್ದಾರೆ. ಆದರೆ, ಆಸ್ಟ್ರೇಲಿಯನ್ ಬೌಲರ್ ಆರ್ಸಿಬಿ ತಂಡದ ಸಹ ಆಟಗಾರನಿಂದ ಇನ್ನಿಂಗ್ಸ್ ಅಂತ್ಯದ ನಿರ್ಣಾಯಕ ಘಟ್ಟದಲ್ಲಿ ಬೌಲಿಂಗ್ ಮಾಡುವ ಕೌಶಲ್ಯ ಕಲಿಯಲು ಬಯಸಿರುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಫಿಂಚ್ ಅವರ ಡೆತ್ ಬೌಲಿಂಗ್ ಭಾಗವಾಗಿದ್ದ ಜಂಪಾ ವಿಫಲರಾಗಿದ್ದರು. ಆದರೆ, ಡೆತ್ ಬೌಲಿಂಗ್ ಕೌಶಲ್ಯವನ್ನು ಕಲಿಯಲು ಅವರು ಉತ್ಸುಕರಾಗಿದ್ದಾರೆ.
ನಿರ್ಣಾಯಕ ಇನ್ನಿಂಗ್ಸ್ ಅಂತ್ಯದಲ್ಲಿ(ಡೆತ್) ಬೌಲಿಂಗ್ನಲ್ಲಿ ಮಾಡುವುದನ್ನು ನಾನು ನಿಜವಾಗಿಯೂ ಆನಂದಿಸುತ್ತ್ತೇನೆ. ವಿಶೇಷವಾಗಿ ಅಂತಹ ಒತ್ತಡದ ಓವರ್ಗಳನ್ನ ಮಾಡಲು ನಾನು ಇಷ್ಟಪಡುತ್ತೇನೆ.
ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ 2 ಓವರ್ಗಳಲ್ಲಿ 18 ರನ್ಗಳ ಅಗತ್ಯವಿದ್ದಾಗ ಫಿಂಚ್ಗೆ ನಾನು ಬೌಲಿಂಗ್ ಮಾಡುತ್ತೇನೆಂದು ಹೇಳಿದೆ. ಆದರೆ, ಅದು ಯೋಜನೆಯಂತೆ ನಡೆಯಲಿಲ್ಲ. ಒಂದು ಇನ್ನಿಂಗ್ಸ್ನಲ್ಲಿ ಯೋಜನೆ ಫಲಿಸದಿದ್ದಕ್ಕೆ ನನ್ನ ಆ ಮನೋವ್ರತ್ತಿ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಆರ್ಸಿಬಿಯಲ್ಲಿ ಚಹಾಲ್ ಅವರೊಂದಿಗೆ ಬೌಲಿಂಗ್ ಮಾಡಲು ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ತಂಡದ ರಚನೆ ಉತ್ತಮವಾಗಿರುವುದರಿಂದ ನನಗೆ ಆ ಹಂತದಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಗಬಹುದು ಎಂದು ನಾನು ಭಾವಿಸಿದ್ದೇನೆ ಎಂದು cricket.com.au ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆದರೆ, ಈಗಾಗಲೇ ಆರ್ಸಿಬಿಯಲ್ಲಿ ವಾಷಿಂಗ್ಟನ್ ಸುಂದರ್, ಪವನ್ ನೇಗಿ ಹಾಗೂ ಇಂಗ್ಲೆಂಡ್ ತಂಡದ ಮೊಯಿನ್ ಅಲಿ ನಡುವೆ ಜಂಪಾಗೆ ಅವಕಾಶ ಸಿಗುವುದು ಸವಾಲಾಗಲಿದೆ. ಯಾಕೆಂದರೆ, ಈ ಮೂವರು ಬೌಲಿಂಗ್ ಜೊತೆಗೆ ತಕ್ಕಮಟ್ಟಿನ ಬ್ಯಾಟಿಂಗ್ ಕೂಡ ನಡೆಸಬಲ್ಲರು. ಚಹಾಲ್ ಜೊತೆಗೆ ಯಾರಾದರೂ ಇಬ್ಬರು ಅವಕಾಶ ಪಡೆಯವ ಸಾಧ್ಯತೆಯಿದೆ.