ಹೈದರಾಬಾದ್: 2020 ಮನುಜ ಕುಲದ ಇತಿಹಾಸದಲ್ಲೇ ಅಸಮಾನ್ಯವಾದ ವರ್ಷಗಳಲ್ಲಿ ಒಂದಾಗಿದೆ. ವರ್ಷದಲ್ಲೇ ಬಹುತೇಕ ತಿಂಗಳುಗಳು ಕೊರೊನಾ ಸಾಂಕ್ರಾಮಿಕ ಭೀತಿಯಿಂದ ಘೋಷಿಸಿದ್ದ ಲಾಕ್ಡೌನ್ನಲ್ಲೇ ಕಳೆಯುವಂತಾಗಿತ್ತು.
ಕೋವಿಡ್ 19 ಪರಿಣಾಮ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದಂತೆ ಕ್ರೀಡಾ ಜಗತ್ತಿನ ಮೇಲೂ ಬೀರಿದ್ದು, ಒಲಿಂಪಿಕ್ಸ್, ಟಿ-20 ವಿಶ್ವಕಪ್ ಸೇರಿದಂತೆ ವಿವಿಧ ಕ್ರೀಡಾಕೂಟಗಳು ಮುಂದೂಡಲ್ಪಟ್ಟವು. ಅಲ್ಲದೇ ಕೆಲವು ಸರಣಿಗಳು, ಟೂರ್ನಮೆಂಟ್ಗಳು ರದ್ದಾದವು. ಇದರ ಮಧ್ಯೆ ಹಲವಾರು ಶ್ರೇಷ್ಠ ಕ್ರೀಡಾಪಟುಗಳು ಕೂಡ ತಮ್ಮ ವೃತ್ತಿ ಜೀವನವನ್ನು ಕೊನೆಗೊಳಿಸಿದರು. ಅಂತಹವರಲ್ಲಿ ಪ್ರಮುಖ ಕ್ರೀಡಾಪಟುಗಳ ವಿವರ ಇಲ್ಲಿದೆ.
ಇಕರ್ ಕ್ಯಾಸಿಲಾಸ್
ಸ್ಪೇನ್‌ನ ವಿಶ್ವಕಪ್ ವಿಜೇತ ತಂಡದ ನಾಯಕ ಮತ್ತು ಗೋಲ್‌ಕೀಪರ್ ಇಕರ್ ಕ್ಯಾಸಿಲಾಸ್ ಅವರು ತಮ್ಮ 39 ನೇ ವಯಸ್ಸಿನಲ್ಲಿ ವೃತ್ತಿಪರ ಫುಟ್ಬಾಲ್ನಿಂದ ನಿವೃತ್ತಿ ಘೋಷಿಸಿದರು. ಪೋರ್ಚುಗೀಸ್ ರಿಯಲ್ ಮ್ಯಾಡ್ರಿಡ್ ಕ್ಲಬ್‌ನೊಂದಿಗಿನ ಒಪ್ಪಂದದ ಅವಧಿ ಮುಗಿದ ನಂತರ ಜುಲೈನಲ್ಲಿ ನಿವೃತ್ತಿ ಘೋಷಿಸಿದ್ದರು.
ಕಳೆದ ವರ್ಷ ತರಬೇತಿ ಅವಧಿಯಲ್ಲಿ ಕ್ಯಾಸಿಲಾಸ್ ಹೃದಯಾಘಾತಕ್ಕೊಳಗಾಗಿದ್ದರು. ಅನಾರೋಗ್ಯದ ಕಾರಣ 2019 ಏಪ್ರಿಲ್ನಿಂದ ಯಾವುದೇ ಸ್ಪರ್ಧಾತ್ಮಕ ಫುಟ್ಬಾಲ್ನಲ್ಲಿ ಪಾಲ್ಗೊಂಡಿರಲಿಲ್ಲ.
ಮರಿಯಾ ಶರಪೋವಾ
5 ಗ್ರ್ಯಾಂಡ್ಸ್ಲಾಮ್ ವಿನ್ನರ್ ರಷ್ಯಾದ ಮರಿಯಾ ಶರಪೋವಾ ತಮ್ಮ 32ನೇ ವಯಸ್ಸಿಗೆ ಟೆನ್ನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದರು. 2016 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಡ್ರಗ್ಸ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಅವರು 15 ತಿಂಗಳ ನಿಷೇಧಕ್ಕೆ ಒಳಾಗಾಗಿದ್ದರು. ರಷ್ಯಾದ ಮಾಜಿ ವಿಶ್ವ ನಂಬರ್ ಒನ್ ಶ್ರೇಯಾಂಕದ ಆಟಗಾರ್ತಿ ನಿವೃತ್ತಿ ಹೊಂದಿದಾಗ 373 ನೇ ಸ್ಥಾನದಲ್ಲಿದ್ದರು.
ಕರೊಲಿನಾ ವುಜ್ನಿಯಾಕಿ
ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಕರೊಲಿನಾ ವುಜ್ನಿಯಾಕಿ ಆಸ್ಟ್ರೇಲಿಯನ್ ಓಪನ್ನ 3ನೇ ಸುತ್ತಿನಲ್ಲಿ ಸೋತು ಹೊರ ಬೀಳುತ್ತಿದ್ದಂತೆ ವೃತ್ತಿ ಬದುಕಿಗೆ ವಿದಾಯ ಹೇಳಿದರು. ಅವರು 2018ರಲ್ಲಿ ಆಸ್ಟ್ರೇಲಿಯಾ ಓಪನ್ ಗೆದ್ದಿದ್ದರು.
ಅಂಡರ್ ಟೇಕರ್
ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಅಂಡರ್ ಟೇಕರ್ ಸರ್ವೈವರ್ ಟೂರ್ನಿಯಲ್ಲಿ ವಿದಾಯ ಹೇಳಿದರು. ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅವರು ಏಪ್ರಿಲ್ 2 ರಂದು ತಮ್ಮ ಕಡೆಯ ಪಂದ್ಯವನ್ನಾಡಿದರು.
ಅಂಡರ್ ಟೇಕರ್ 1990 ರಲ್ಲಿ ಸರ್ವೈವರ್ ಸರಣಿಯ ಮೂಲಕ ತಮ್ಮ ಡಬ್ಲ್ಯೂಡಬ್ಲ್ಯೂಇ ವೃತ್ತಿ ಜೀವನಕ್ಕೆ ಕಾಲಿಟ್ಟರು. ಈ ಸುದೀರ್ಘ ಪಯಣದಲ್ಲಿ ಮೂರು ಬಾರಿ ವಿಶ್ವ ಹೆವಿವೇಯ್ಟ್ ಚಾಂಪಿಯನ್‌ಶಿಪ್, 4 ಬಾರಿ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್‌ಶಿಪ್, ಒಮ್ಮೆ ಬಾರಿ ಡಬ್ಲ್ಯೂಡಬ್ಲ್ಯೂಇ ಹಾರ್ಡ್‌ಕೋರ್ ಚಾಂಪಿಯನ್‌ಶಿಪ್, ಆರು ಬಾರಿ ಡಬ್ಲ್ಯೂಡಬ್ಲ್ಯೂಇ ವರ್ಲ್ಡ್ ಟ್ಯಾಗ್ ಟೀಂ ಚಾಂಪಿಯನ್‌ಶಿಪ್ ಮತ್ತು 2007 ರಲ್ಲಿ ರಾಯಲ್ ರಂಬಲ್ ಗೆದ್ದ ಸಾಧನೆ ಮಾಡಿದ್ದರು.
ಇರ್ಫಾನ್ ಪಠಾಣ್
ಭಾರತ ತಂಡದ ಸ್ಟಾರ್ ಆಲ್ರೌಂಡರ್ ಇರ್ಫಾನ್ ಪಠಾಣ್ ಈ ವರ್ಷದ ಜನವರಿ 4ರಂದು ತಮ್ಮ 16 ವರ್ಷಗಳು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. 2003ರಲ್ಲಿ ತಮಗೆ 16 ವರ್ಷದವರಿದ್ದಾಗ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆದರೆ, ಅವರು 2012ರ ನಂತರ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, 2019ರವರೆಗೂ ದೇಶಿ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದರು.
ಪಾರ್ಥೀವ್ ಪಟೇಲ್
ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕಿರಿಯ ವಿಕೆಟ್ ಕೀಪರ್ ಎನಿಸಿಕೊಂಡಿದ್ದ ಪಾರ್ಥೀವ್ ಪಟೇಲ್ ಡಿಸೆಂಬರ್ 9 ರಂದು ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರು. ಮಗುವಿನ ಮುಖದ ಪಾರ್ಥೀವ್ ಪಟೇಲ್ ಸೌರವ್ ಗಂಗೂಲಿ ನಾಯಕತ್ವದಲ್ಲಿ ಪದಾರ್ಪಣೆ ಮಾಡಿದ್ದರು. ಅವರು 25 ಟೆಸ್ಟ್, 38 ಏಕದಿನ ಹಾಗೂ 2 ಟಿ -20 ಪಂದ್ಯಗಳನ್ನಾಡಿದ್ದಾರೆ.
ಮೊಹಮ್ಮದ್ ಅಮೀರ್
ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಡೆಯಿಂದ ಬೇಸತ್ತು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ತಮ್ಮ 28 ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದರು. ಅವರನ್ನು ಪಿಸಿಬಿ ವಾರ್ಷಿಕ ಗುತ್ತಿಗೆ ಮತ್ತು ಕಿವೀಸ್ ಸರಣಿಯಿಂದ ಆಯ್ಕೆ ಮಾಡದಿರುವುದಕ್ಕೆ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದರು.
2011ರಲ್ಲಿ ಮ್ಯಾಚ್ ಫಿಕ್ಸಿಂಗ್ನಿಂದ 3 ತಿಂಗಳು ಜೈಲು ಸೇರಿದ್ದ ಅಮೀರ್ ನಂತರ 5 ವರ್ಷಗಳ ನಿಷೇಧ ಮುಗಿಸಿ ಮತ್ತೆ ಪಾಕಿಸ್ತಾನ ತಂಡಕ್ಕೆ ಮರಳಿದ್ದರು. ನಂತರ ತಂಡದ ವೇಗದ ಬೌಲಿಂಗ್ನ ಪ್ರಮುಖ ಅಸ್ತ್ರವಾಗಿದ್ದ ಅವರು ಸೀಮಿತ ಓವರ್ಗಳಲ್ಲಿ ಹೆಚ್ಚು ಗಮನ ನೀಡುವ ಉದ್ದೇಶದಿಂದ ಟೆಸ್ಟ್ ಕ್ರಿಕೆಟ್ಗೆ 2017ರಲ್ಲಿ ನಿವೃತ್ತಿ ಘೋಷಿಸಿದ್ದರು. ಅಮೀರ್ ಪಾಕ್ ಪರ 36 ಟೆಸ್ಟ್, 61 ಏಕದಿನ ಹಾಗೂ 50 ಟಿ-20 ಪಂದ್ಯಗಳನ್ನಾಡಿದ್ದರು.
ಸುರೇಶ್ ರೈನಾ
ಭಾರತ ತಂಡದ ಪವರ್ ಹಿಟ್ಟರ್ ಎಂದೇ ಖ್ಯಾತರಾಗಿದ್ದ ಸುರೇಶ್ ರೈನಾ ತಮ್ಮ ಆಗಸ್ಟ್ 15 ರಂದು ಧೋನಿ ನಿವೃತ್ತಿ ಘೋಷಿಸಿದ ಅರ್ಧಗಂಟೆಯ ನಂತರ ತಾವೂ ಕೂಡ ಅಚ್ಚರಿಯ ನಿವೃತ್ತಿ ಘೋಷಿಸಿದರು. ಅವರು 2005ರ ಜುಲೈ 30ರಂದು ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದರು. ಅವರು ಭಾರತದ ಪರ 226 ಏಕದಿನ ಪಂದ್ಯಗಳಿಂದ 5,615 ರನ್, 78 ಟಿ20 ಪಂದ್ಯಗಳಿಂದ 1605 ಹಾಗೂ 19 ಟೆಸ್ಟ್ ಪಂದ್ಯಗಳಿಂದ 768 ರನ್ಗಳಿಸಿದ್ದರು.
ಎಂಎಸ್ ಧೋನಿ
ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, ಮೂರು ಐಸಿಸಿ ಟ್ರೋಫಿ ಗೆದ್ದಿರುವ ವಿಶ್ವದ ಏಕೈಕ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಎಂಎಸ್ ಧೋನಿ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಟಿ-20 ವಿಶ್ವಕಪ್ ರದ್ದಾಗಿದ್ದರಿಂದ ಅವರು 16 ವರ್ಷದ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದರು.
ಎಂಎಸ್ ಧೋನಿ ಭಾರತಕ್ಕೆ 2007ರಲ್ಲಿ ಟಿ-20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದರು. 2004ರಲ್ಲಿ ಪದಾರ್ಪಣೆ ಮಾಡಿದ್ದ ಅವರು 16 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಧೋನಿ 90 ಟೆಸ್ಟ್ 350 ಏಕದಿನ ಪಂದ್ಯ ಹಾಗೂ 98 ಟಿ-20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 4876, 10773 ಹಾಗೂ 1617 ರನ್ಗಳಿಸಿದ್ದಾರೆ.
ಇವರಷ್ಟೇ ಅಲ್ಲದೆ ಚೀನಾದ ಬ್ಯಾಡ್ಮಿಂಟನ್ ಆಟಗಾರ ಲಿನ್ ಡಾನ್, ಟೆನ್ನಿಸ್ನ ಡಬಲ್ ವಿಭಾಗದ ಶ್ರೇಷ್ಠ ಜೋಡಿಯಾದ ಬ್ರಿಯಾನ್ ಬ್ರದರ್ಸ್ ಕೂಡ ಈ ವರ್ಷ ಎಲ್ಲಾ ತಮ್ಮ ವೃತ್ತಿ ಬದುಕಿಗೆ ವಿದಾಯ ಘೋಷಿಸಿದರು.