ಬೆಂಗಳೂರು: ಬಿಸಿಸಿಐ ಆಯೋಜಿಸುವ ಏಕದಿನ ಟೂರ್ನಿಯಾದ ವಿಜಯ್ ಹಜಾರೆ ಟೂರ್ನಿ ಮುಗಿದು ಕರ್ನಾಟಕ ತಂಡ 5 ಬಾರಿಯ ಚಾಂಪಿಯನ್ ತಮಿಳುನಾಡನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ.
ಈ ಟೂರ್ನಿಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳೂ ಪ್ರಾಬಲ್ಯ ಸಾಧಿಸಿದ್ದವು. ಕೊನೆಯಲ್ಲಿ ಪ್ರಶಸ್ತಿ ಮಾತ್ರ ಕರ್ನಾಟಕ ಕೈ ಸೇರಿತ್ತು. ಇದಕ್ಕೆ ಕಾರಣಕರ್ತರಲ್ಲಿ 19 ರ ಯುವಕ ದೇವದತ್ ಪಡಿಕ್ಕಲ್ ಪಾತ್ರ ಪ್ರಮುಖವಾಗಿತ್ತು.
ಟೂರ್ನಿ ಟಾಪ್ ಸ್ಕೋರರ್ ಕನ್ನಡಿಗ ದೇವದತ್ ಪಡಿಕ್ಕಲ್: ಮನೀಷ್ ಪಾಂಡೆ, ಕೆಎಲ್ ರಾಹುಲ್‌ರಂತಹ ರಾಷ್ಟ್ರೀಯ ಆಟಗಾರರ ಬೆಂಬಲ ಪಡೆದು ಸರಣಿಯುದ್ದಕ್ಕೂ ವಿಜೃಂಭಿಸಿದ ದೇವದತ್ ಪಡಿಕ್ಕಲ್, ಟೂರ್ನಿಯಲ್ಲಿ ಬರೋಬ್ಬರಿ 609 ರನ್ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು. ಭಾರತ ಅಂಡರ್ 19 ತಂಡದಲ್ಲಿ ಆಡುತ್ತಿರುವ ಈತ ಟೂರ್ನಿಯಲ್ಲಿ 2 ಶತಕ ಹಾಗೂ 5 ಅರ್ಧಶತಕ ದಾಖಲಿಸಿದ್ದು ವಿಶೇಷವಾಗಿತ್ತು.
6 ಪಂದ್ಯಕ್ಕೆ 564 ರನ್ ಸಿಡಿಸಿದ ಜೈಸ್ವಾಲ್: ಮುಂಬೈ ತಂಡದ ಪರ ಕೇವಲ 6 ಪಂದ್ಯಗಳನ್ನಾಡಿದ 17 ವರ್ಷದ ಯಶಸ್ವಿ ಜೈಸ್ವಾಲ್ 112ರ ಸರಾಸರಿಯಲ್ಲಿ 564 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಜೈಸ್ವಾಲ್ ಆಡಿದ 6 ಪಂದ್ಯಗಳಲ್ಲಿ 3 ಶತಕ ಹಾಗೂ 1 ಅರ್ಧಶತಕ ದಾಖಲಿಸಿದ್ದಾರೆ. ಇದರಲ್ಲಿ 203 ರನ್ಗಳಿಸಿ ದ್ವಿಶತಕ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಸಹಾ ತಮ್ಮ ಹೆಸರಿಗೆ ಬರೆದುಕೊಂಡರು.
ಪ್ರಿಯಮ್ ಗರ್ಗ್ 287 ರನ್: ಪ್ರಸ್ತುತ ಭಾರತ ಅಂಡರ್ 19 ತಂಡದ ನಾಯಕನಾಗಿರುವ ಪ್ರಿಯಮ್ ಗರ್ಗ್ ಉತ್ತರ ಪ್ರದೇಶದ ಪರ 6 ಪಂದ್ಯಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, ತಲಾ ಒಂದು ಶತಕ ಹಾಗೂ ಒಂದು ಅರ್ಧಶತಕ ಸೇರಿದಂತೆ 287 ರನ್ಗಳಿಸಿ ಮಿಂಚಿದ್ದಾರೆ.
ಈ ಮೂವರು ಯುವ ಬ್ಯಾಟ್ಸ್ಮನ್ಗಳು ಭಾರತ ಅಂಡರ್-19 ತಂಡದಲ್ಲಿದ್ದಾರೆ. ಮುಂದಿನ ವರ್ಷ ಐಸಿಸಿ ಅಂಡರ್-19 ವಿಶ್ವಕಪ್ ಆಯೋಜನೆ ಮಾಡುತ್ತಿರುವುದರಿಂದ ಭಾರತ ತಂಡದಕ್ಕೆ ಕಿರಿಯರ ವಿಭಾಗದಲ್ಲಿ ಮತ್ತೊಂದು ಪದಕ ತಂದುಕೊಡಲು ಇವರ ಆಟದಿಂದ ಸಾಧ್ಯವಾಗಲಿದೆ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ಇನ್ನು, ಡಿಸೆಂಬರ್ನಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ಇರುವುದರಿಂದ ಈ ಟೀನೇಜ್ ಕ್ರಿಕೆಟರ್ಗಳ ಮೇಲೆ ಹಲವು ಪ್ರಾಂಚೈಸಿಗಳು ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.