ಲೀಡ್ಸ್: ಐಸಿಸಿ ಏಕದಿನ ವಿಶ್ವಕಪ್ನ 42ನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗೆಲುವು ದಾಖಲು ಮಾಡುವ ಮೂಲಕ ವೆಸ್ಟ್ ಇಂಡೀಸ್ ತನ್ನ ಅಭಿಯಾನ ಕೊನೆಗೊಳಿಸಿದ್ದು, ಸೋಲಿನ ಮುಖಭಂಗದೊಂದಿಗೆ ಅಫ್ಘಾನ್ ವಿಶ್ವಕಪ್ ಮಹಾಟೂರ್ನಿಗೆ ವಿದಾಯ ಹೇಳಿದೆ.
ಇಲ್ಲಿನ ಲೀಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್, ಶಾಯ್ ಹೋಪ್ (77), ಎವಿನ್ ಲೆವಿಸ್ (58) ಹಾಗೂ ನಿಕೋಲಸ್ ಪೂರನ್ (58) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಈ ಬೆನ್ನತ್ತಿದ್ದ ಅಫ್ಘಾನ್ ತಂಡ ಆರಂಭಿಕ ನಬಿ ವಿಕೆಟ್ ಬೇಗನೆ ಕಳೆದುಕೊಳ್ತು. ಇದಾದ ಬಳಿಕ ಒಂದಾದ ರಹಮತ್ ಶಾ ಹಾಗೂ ಇಕ್ರಾಂ ಅಲಿ ಜೋಡಿ ತಂಡಕ್ಕೆ 133 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು. ರಹಮತ್ 10 ಬೌಂಡರಿಗಳಿಂದ 62 ರನ್ ಗಳಿಸಿದರೆ, ಇಕ್ರಾಂ 8 ಬೌಂಡರಿಗಳೊಂದಿಗೆ 86 ರನ್ ಗಳಿಸಿದರು. ಈ ವೇಳೆ ಬೌಲಿಂಗ್ ದಾಳಿಗೆ ಇಳಿದ ಗೇಲ್ 36ನೇ ಓವರ್ನಲ್ಲಿ ಇಕ್ರಾಂ(62) ಹಾಗೂ ನಜಿಬುಲ್ಲಾ (31) ವಿಕೆಟ್ ಪಡೆದುಕೊಂಡರು. ಇದರಿಂದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಕಮ್ಬ್ಯಾಕ್ ಮಾಡಿತು.
ಇದಾದ ಬಳಿಕ ಅಸ್ಗರ್ ಅಫ್ಘನ್ 40 ರನ್ ಗಳಿಕೆ ಮಾಡಿ ತಂಡವನ್ನ ಗೆಲುವಿನತ್ತ ಮುನ್ನಡೆಸಿದ ಪ್ರಯತ್ನ ಸಹ ವಿಫಲವಾಯಿತು. ಆದರೆ ಉಳಿದ ಬ್ಯಾಟ್ಸ್ಮನ್ಗಳಾದ ಮೊಹಮ್ಮದ್ ನಬಿ(2), ಶಿರವಾನಿ(6), ರಶೀದ್ ಖಾನ್(9), ದಾವ್ಲತ್ ಖದ್ರಾನ್(1) ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಕೊನೆಯದಾಗಿ ಅಬ್ಬರಿಸಿದ ಶಿರ್ಜಾದ್ 17 ಎಸೆತಗಳಲ್ಲಿ 25 ರನ್ ಗಳಿಸಿ ಗೆಲುವಿನ ಆಸೆ ಮೂಡಿಸಿದ್ರೂ ಪ್ರಯೋಜನವಾಗಲಿಲ್ಲ. ಹೀಗಾಗಿ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 288 ರನ್ಗಳಿಕೆ ಮಾಡುವ ಮೂಲಕ 23 ರನ್‌ಗಳ ಸೋಲು ಅನುಭವಿಸಿತು. ವೆಸ್ಟ್ ಇಂಡೀಸ್ ಪರ ಬ್ರಾತ್ವೈಟ್ 4 ವಿಕೆಟ್, ಕೆಮ್ರಾನ್ ರೂಚ್ 3 ವಿಕೆಟ್, ಗೇಲ್ 1ವಿಕೆಟ್ ಹಾಗೂ ಥಾಮಸ್ 1 ವಿಕೆಟ್ ಪಡೆದುಕೊಂಡರು.
ಈ ಸೋಲಿನೊಂದಿಗೆ ಅಫ್ಘಾನಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ತಾನಾಡಿರುವ ಎಲ್ಲ ಪಂದ್ಯಗಳಲ್ಲೂ ಸೋತ ಸಾಧನೆ ಮಾಡಿದ್ದರೆ, ವೆಸ್ಟ್ ಇಂಡೀಸ್ 9 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 6 ಪಂದ್ಯಗಳಲ್ಲಿ ಸೋತು, ಒಂದು ಪಂದ್ಯ ಡ್ರಾ ಮಾಡಿಕೊಂಡಿದೆ.