ಲಂಡನ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ 2019 ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಸೆಮಿಫೈನಲ್ ಪ್ರವೇಶಿಸಿಲು ಎಲ್ಲ ತಂಡಗಳು ಇನ್ನಿಲ್ಲದ ಕಸರತ್ತು ನಡೆಸಿವೆ.
ಹೌದು, ಈಗಾಗಲೇ ಭಾರತ ಮತ್ತು ಬಾಂಗ್ಲಾದೇಶ ಹೊರತುಪಡಿಸಿ ಉಳಿದ ಎಲ್ಲ ತಂಡಗಳು 8 ಪಂದ್ಯಗಳನ್ನಾಡಿದ್ದು, ಭಾರತ ಮತ್ತು ಬಾಂಗ್ಲಾ ಏಳು ಪಂದ್ಯಗಳನ್ನಾಡಿವೆ. ಈಗಾಗಲೇ ಕಾಂಗರೂ ಪಡೆ ಮೊದಲ ಸ್ಥಾನವನ್ನು ಖಾತರಿ ಪಡಿಸಿಕೊಂಡಿರುವುದರಿಂದ, ಅದರ ಸೆಮಿಫೈನಲ್ ಹಾದಿ ಬಹುತೇಕ ಖಚಿತವಾಗಿದೆ. ಆದರೆ, ಉಳಿದ ಮೂರು ಸ್ಥಾನಗಳಿಗೆ ಪೈಪೋಟಿ ಜೋರಾಗಿದೆ. ಆ ಮೂರು ಸ್ಥಾನಗಳನ್ನ ಯಾವ ತಂಡ ಅಲಂಕರಿಸುತ್ತದೆ. ಮತ್ತು ಯಾವ ತಂಡ ಸೆಮಿಫೈನಲ್ಗ ಲಗ್ಗೆ ಇಡುತ್ತದೆ ಎನ್ನುವುದು ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.
ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಟೀಂ ಮೊದಲ ಸ್ಥಾನ ಅಲಂಕರಿಸಿದ್ದು, ಆಡಿದ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದುಕೊಂಡು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ನಂ .1 ಸ್ಥಾನವನ್ನು ಖಾತರಿಪಡಿಸಿಕೊಂಡಿದೆ. ಹೀಗೆ ಕಾಂಗರೂ ಪಡೆ ನಂ 1 ಸ್ಥಾನದಲ್ಲಿ ಮುಂದುವರೆದರೆ ಈ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ 4 ಸ್ಥಾನ ಪಡೆದ ತಂಡದ ವಿರುದ್ಧ ಸೆಮಿಫೈನಲ್ನಲ್ಲಿ ಸೆಣಸಾಡಲಿದೆ.
ಆದರೆ, ಸದ್ಯಕ್ಕೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಉಳಿದ ಎರಡೂ ಪಂದ್ಯಗಳನ್ನ ಗೆದ್ದರೆ ಮಾತ್ರವೇ ಸೆಮಿಫೈನಲ್ ಪ್ರವೇಶ ಪಡೆದುಕೊಳ್ಳುತ್ತದೆ. ಒಂದು ವೇಳೆ ಭಾರತ ತಂಡ ಒಂದು ಪಂದ್ಯ ಸೋತರೂ ಅಥವಾ ಮಳೆಯಿಂದ ರದ್ದಾದರೂ ಭಾರತ ತಂಡದ ಸೆಮಿಫೈನಲ್ ಹಾದಿ ಕಠಿಣವಾಗಲಿದೆ. ಕೊಹ್ಲಿ ಪಡೆ ಲೀಗ್ನಲ್ಲಿ 7 ಪಂದ್ಯಗಳನ್ನಾಡಿದ್ದು, 5 ಪಂದ್ಯದಲ್ಲಿ ಗೆಲುವು ಸಾಧಿಸಿ ಒಂದು ಪಂದ್ಯದಲ್ಲಿ ಸೋಲು ಕಂಡಿದ್ದರೆ, ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. 7 ಪಂದ್ಯಗಳಿಂದ ಒಟ್ಟಾರೆ 11 ಅಂಕ ಗಳಿಸಿರುವ ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದೆ. +0.854 ರನ್ ರೇಟ್ ಹೊಂದಿರುವ ಭಾರತ ಇದೇ ರನ್ರೇಟ್ ಮುಂದುವರಿಸಿದರೆ ಎರಡು ಅಥವಾ ಮೂರನೇ ಸ್ಥಾನ ಪಡೆಯುವುದು ಖಚಿತವಾಗಿದೆ.
ನ್ಯೂಜಿಲ್ಯಾಂಡ್ ತಂಡ ಸಹ ಸೆಮಿ ಫೈಟ್ನಲ್ಲಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈಗಾಗಲೇ ಕಿವೀಸ್ ಪಡೆ 8 ಪಂದ್ಯಗಳನ್ನಾಡಿದ್ದು 5 ರಲ್ಲಿ ಗೆದ್ದು ಎರಡಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಇದು ಕೂಡಾ 11 ಅಂಕ ಪಡೆದಿದ್ದು, +0.572 ರನ್ ರೇಟ್ ಮೂಲಕ ಮೂರನೇ ಸ್ಥಾನದಲ್ಲಿದೆ. ಕಿವೀಸ್ ಪಡೆಗೆ ಕಡೆಯ ಪಂದ್ಯದಲ್ಲಿ ಗೆಲ್ಲುವ ಅನಿವಾರ್ಯತೆ ಹೆಚ್ಚಿದೆ. ಒಂದು ವೇಳೆ ಆ ಪಂದ್ಯದಲ್ಲಿ ಏನಾದರೂ ಕಿವೀಸ್ ಟೀಂ ಸೋಲು ಕಂಡರೆ ಸೆಮಿಫೈನಲ್ ಹಾದಿ ಕಠಿಣವಾಗಲಿದೆ.
ಸೆಮಿಫೈನಲ್ಗೆ ಲಗ್ಗೆ ಇಡಲು ಇನ್ನೂ ಮೂರು ತಂಡಗಳಿಗೆ ಅವಕಾಶವಿದ್ದು, ಈ ಮೂರು ತಂಡಗಳಲ್ಲಿ ಪ್ರಬಲ ಪೈಪೋಟಿ ನಡೆದಿದೆ. ಆ ಮೂರು ತಂಡಗಳು ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳಿಗೂ ಅವಕಾಶವಿದೆ. ಆದರೆ, ಈ ತಂಡಗಳು ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಅನಿರ್ವಾತೆಯಲ್ಲಿವೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳಿಗೆ ಒಂದು ಪಂದ್ಯ ಮಾತ್ರ ಬಾಕಿ ಇದ್ದು, ಬಾಂಗ್ಲಾ ತಂಡಕ್ಕೆ ಎರಡು ಪಂದ್ಯಗಳು ಉಳಿದಿವೆ.
ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶ ಪಡೆಯಬೇಕಾದರೆ ಕಿವೀಸ್ ವಿರುದ್ಧ ಪಂದ್ಯದಲ್ಲಿ ಗೆಲ್ಲುವ ಅನಿವಾರ್ಯತೆ ಇದೆ. ಹಾಗೆಯೇ ಪಾಕಿಸ್ತಾನ ತಂಡ ಕೂಡಾ ಬಾಂಗ್ಲಾ ವಿರುದ್ಧ ಪಂದ್ಯ ಗೆಲ್ಲುವ ಒತ್ತಡದಲ್ಲಿದೆ. ಈ ಎರಡು ಪಂದ್ಯಗಳಲ್ಲಿ ಯಾವ ತಂಡ ಗೆಲುವು ಸಾಧಿಸುತ್ತದೆಯೋ, ಆ ತಂಡ ಸೆಮಿಸ್ಗೆ ಎಂಟ್ರಿ ಕೊಡುತ್ತದೆ. ಹಾಗೆಯೇ ಬಾಂಗ್ಲಾ ತಂಡಕ್ಕೂ ಕೂಡಾ ಅವಕಾಶವಿದ್ದು, ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಒಂದು ವೇಳೆ ಎರಡು ಪಂದ್ಯಗಳಲ್ಲಿ ಬಾಂಗ್ಲಾ ತಂಡ ಉತ್ತಮ ರನ್ ರೇಟ್ನಿಂದ ಗೆದ್ದರೆ ಸೆಮಿಫೈನಲ್ಗೆ ಪ್ರವೇಶ ಪಡೆಯುವ ಅವಕಾಶವಿದೆ.