ಪರ್ತ್: ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಸೋಲುಣಿಸಿರುವ ಬಲಿಷ್ಠ ಭಾರತ ತಂಡಕ್ಕೆ ಬಾಂಗ್ಲಾದೇಶ ತಂಡ ಎದುರಾಗಲಿದೆ.
ಪೂನಾಂ ಯಾದವ್ ಮ್ಯಾಜಿಕ್ ಸ್ಪೆಲ್ ಹಾಗೂ ದೀಪ್ತಿ ಶರ್ಮಾ ಅವರ ಆಲ್ರೌಂಡ್ ಆಟದ ನೆರವಿನಿಂದ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ 17 ರನ್ಗಳಿಂದ ಜಯ ಸಾಧಿಸಿದೆ. ಇದೀಗ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿ ನಾಕೌಟ್ ದಾರಿಯನ್ನು ಸುಗಮ ಮಾಡಿಕೊಳ್ಳುವ ಕಾತುರದಲ್ಲಿದೆ.
ಇತ್ತ ಬಾಂಗ್ಲಾದೇಶ ತಂಡ ಈ ಸೀಸನ್ನ ತನ್ನ ಮೊದಲ ಪಂದ್ಯವನ್ನಾಡುತ್ತಿದ್ದು ಭಾರತಕ್ಕೆ ಪೈಪೋಟಿ ನೀಡಲು ಸಜ್ಜಾಗಿದೆ. ಕೊನೆಯ ಬಾರಿ 2018ರ ಟಿ20 ಏಷ್ಯಾಕಪ್ ಫೈನಲ್ನಲ್ಲಿ ಭಾರತ-ಬಾಂಗ್ಲಾ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತವನ್ನು ಮಣಿಸಿದ್ದ ಬಾಂಗ್ಲಾದೇಶ ಚೊಚ್ಚಲ ಏಷ್ಯಾಕಪ್ ಕಿರೀಟ ಎತ್ತಿ ಹಿಡಿದಿತ್ತು.
ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲುಣಿಸಲು ನೆರವಾಗಿರುವ ಆಲ್ರೌಂಡರ್ ಜಹನಾರಾ ಆಲಮ್ , ಆರಂಭಿಕ ಬ್ಯಾಟ್ಸ್ವುಮನ್ ಫರ್ಗಾನ ಹಕ್ ಬಾಂಗ್ಲಾ ತಂಡದ ಪ್ರಮುಖ ಆಟಗಾರ್ತಿಯರು. ಅಲಮ್ ಬಾಂಗ್ಲಾ ತಂಡದ ಪರ ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಏಷ್ಯಾಕಪ್ ಗುಂಪು ಹಂತದ ಪಂದ್ಯದಲ್ಲಿ ಗೆಲ್ಲಲು ಸಹ ಇವರೇ ಪ್ರಮುಖ ಪಾತ್ರವಹಿಸಿದ್ದರು.
ಇನ್ನು ಸೋಮವಾರ ಮತ್ತೊಂದು ಗುಂಪು ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಇವೆರಡು ತಂಡಗೂ ಈಗಾಗಲೇ ತಮ್ಮ ಮೊದಲ ಪಂದ್ಯದಲ್ಲಿ ಸೋಲು ಕಂಡಿವೆ.