ನವದೆಹಲಿ: ವಿದೇಶದಲ್ಲಿ ಯಶಸ್ಸು ಸಾಧಿಸುತ್ತಿರುವುದು ಸೇರಿದಂತೆ ವಿಶ್ವ ಕ್ರಿಕೆಟ್‌ನಲ್ಲಿ ಭಾರತ ತಂಡ ಅಪಾರ ಪ್ರತಿಭೆಗಳ ಅನಾವರಣದೊಂದಿಗೆ ತನ್ನದೇ ಆದ ಪ್ರಾಬಲ್ಯದ ಯುಗವನ್ನು ರೂಪಿಸುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಹೊಂದಿರುವ ಅಸಾಧಾರಣ ಪ್ರತಿಭೆಗಳ ಆಳ ಮತ್ತು ಯಶಸ್ಸಿನ ದರದ ಆಧಾರದ ಮೇಲೆ ಆಸ್ಟ್ರೇಲಿಯಾದ ಮಾಜಿ ನಾಯಕ ಚಾಪೆಲ್, ಭವಿಷ್ಯದಲ್ಲಿ ಟೀಂ ಇಂಡಿಯಾ ಶಕ್ತಿಯುತ ಕ್ರಿಕೆಟ್ ರಾಷ್ಟ್ರ ಎನಿಸಿಕೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
"ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡ ಅದ್ಭುತ ಯಶಸ್ಸು ಸಾಧಿಸಿದೆ. ವಿಶೇಷವಾಗಿ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ತೋರಿದ ಪ್ರದರ್ಶನ. ಅದು ಆಟಗಾರರಲ್ಲಿ ತಂಡಕ್ಕಾಗಿ ಯಾವುದೇ ಸಂದರ್ಭದಲ್ಲಾದರೂ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ತಮಗಿದೆ ಎಂಬ ನಂಬಿಕೆಯನ್ನು ಬಲಪಡಿಸಿದೆ" ಎಂದು ಚಾಪೆಲ್ ಪ್ರಸಿದ್ಧ ಕ್ರಿಕೆಟ್ ವೆಬ್ಸೈಟ್ಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 'ಗೆಟ್ ವೆಲ್ ಸೂನ್ ಮಾಸ್ಟರ್ ಬ್ಲಾಸ್ಟರ್': ಸಚಿನ್ಗೆ ವಿವಿಯನ್ ರಿಚರ್ಡ್ಸ್ ಹಾರೈಕೆ
ಈ ಹಿಂದೆ ವಿದೇಶದ ಸರಣಿಗಳಲ್ಲಿ ಭಾರತ ತುಂಬಾ ಸಮಸ್ಯೆ ಎದುರಿಸುತ್ತಿತ್ತು. ಆದರೆ ಪ್ರಸ್ತುತ ಅದ್ಭುತ ಪ್ರತಿಭೆಗಳನ್ನು ಹೊಂದಿದೆ. ಇದನ್ನು ಗಮನಿಸಿದರೆ ಪೂರ್ವದಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕ್ರಿಕೆಟ್‌ನಲ್ಲಿ ಹೊಂದಿದ್ದ ಪ್ರಾಬಲ್ಯವನ್ನು ಭಾರತ ಈ ಯುಗದಲ್ಲಿ ಪುನಾರಾವರ್ತಿಸಲಿದೆ. ಈ ತಂಡಗಳೂ ಕೂಡ ಸಾಕಷ್ಟು ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿದ್ದರಿಂದ ತಮ್ಮ ಅತ್ಯುತ್ತಮ 11ರ ಬಳಗವನ್ನು ಆಯ್ಕೆ ಮಾಡಲು ಕಷ್ಟಪಡುತ್ತಿದ್ದವು" ಎಂದು ಅವರು ಉಲ್ಲೇಖಿಸಿದ್ದಾರೆ.
ಇತ್ತೀಚಿನ ಭಾರತದ ಯಶಸ್ಸಿನಲ್ಲಿ ಯುವ ಪ್ರತಿಭೆಗಳ ಪ್ರದರ್ಶನದ ಬಗ್ಗೆಯೂ ಚಾಪೆಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು, "ಶುಬ್ಮನ್ ಗಿಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್ ಮತ್ತು ಅಕ್ಷರ್ ಪಟೇಲ್‌ರಂತಹ ಪ್ರತಿಭೆಗಳ ಅನಾವರಣ ಕೇವಲ ಮೂರು ತಿಂಗಳಲ್ಲಿ ನಡೆದಿದೆ. ಜೊತೆಗೆ ಶಾರ್ದುಲ್ ಠಾಕೂರ್ ತಮ್ಮ 2ನೇ ಟೆಸ್ಟ್ನಲ್ಲಿ ತೋರಿದ ಪ್ರದರ್ಶನ ಅದ್ಭುತವಾಗಿದೆ. ಇನ್ನು ಪಂತ್ 20 ಪಂದ್ಯಗಳನ್ನಾಡುವ ಮುನ್ನವೇ ಮ್ಯಾಚ್ ವಿನ್ನರ್ ಎನಿಸಿಕೊಳ್ಳುತ್ತಿರುವುದನ್ನು ನೀವು ಪರಿಗಣಿಸಿದರೆ, ಇದು ಖಂಡಿತ ನಿಜವಾದ ಯಶಸ್ಸು ಎಂದೇ ಹೇಳಬಹುದು" ಎಂದು ಆಸೀಸ್ ದಂತಕಥೆ ಲೇಖನದಲ್ಲಿ ಭಾರತದ ಯುವ ಪ್ರತಿಭೆಗಳನ್ನು ಶ್ಲಾಘಿಸಿದ್ದಾರೆ.