ಲಂಡನ್: ವಿಶ್ವದೆಲ್ಲೆಡೆ ಕೊರೊನಾ ಭೀತಿಯಿಂದ ಮೂರು ತಿಂಗಳಿಂದ ಯಾವುದೇ ಮಾದರಿಯ ಕ್ರಿಕೆಟ್ ನಡೆದಿಲ್ಲ. ಇದೀಗ ಜೂನ್ ಕೊನೆಯ ವಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವ ಸಾಧ್ಯತೆಯಿದ್ದು, ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ಕೊರೊನಾ ವೈರಸ್ ಭೀತಿಯಿಂದ ಕಳೆದ 2-3 ತಿಂಗಳಿನಿಂದ ಕ್ರಿಕೆಟ್ ಸಂಪೂರ್ಣ ಸ್ಥಗಿತಗೊಂಡಿದೆ. ವಿಶ್ವದೆಲ್ಲೆಡೆ ಕೆಲವು ಪ್ರದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ಕಡಿಮೆಯಾಗಿರುವುದರಿಂದ ಮುಂದಿನ ತಿಂಗಳಲ್ಲಿ ಕ್ರಿಕೆಟ್ ಪುನರಾರಂಭವಾಗುವ ನಿರೀಕ್ಷೆಯಿದೆ.
ಇದೀಗ ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಕಳುಹಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳತ್ತಿದೆ.
ಈ ಸರಣಿ ಆಯೋಜನೆ ಮಾಡಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹಾಗೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಕಳೆದ ಆರು ವಾರಗಳಿಂದ ಮಾತುಕತೆ ನಡೆಸುತ್ತಿವೆ. ಸದ್ಯದ ಪರಿಸ್ಥಿತಿ ಸರಣಿ ನಡೆಸಲು ಉತ್ತಮವಿರುವುದರಿಂದ ಇಸಿಬಿಯಿಂದ ಅಧಿಕೃತ ಆಹ್ವಾನ ಮಾತ್ರವೇ ಬರಬೇಕಾಗಿದೆ.
ಜೂನ್ 8ರಂದು ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಆಟಗಾರರು ಮತ್ತು ಇತರೆ ಸಿಬ್ಬಂದಿ ಸೇರಿ 25 ಜನರ ತಂಡ ಇಂಗ್ಲೆಂಡ್‌ಗೆ ತೆರಳಲಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನಿ ಗ್ರೇವ್ ತಿಳಿಸಿದ್ದಾರೆ.
ಜುಲೈ 8-12ರವರೆಗೆ ಮೊದಲ ಟೆಸ್ಟ್, ಎರಡನೇ ಟೆಸ್ಟ್ ಜುಲೈ 16-20 ಮತ್ತು ಮೂರನೇ ಟೆಸ್ಟ್ ಪಂದ್ಯ 24-28ರವರೆಗೆ ನಡೆಸಲು ತೀರ್ಮಾನಿಸಿದೆ.