ನವದೆಹಲಿ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ನಡೆಯುವ ದಿನಾಂಕ ಇದೀಗ ಅಧಿಕೃತವಾಗಿ ಕನ್ಫರ್ಮ್ ಆಗಿದ್ದು, ಸೆಪ್ಟೆಂಬರ್ 19ರಿಂದ ಆರಂಭಗೊಂಡು ನವೆಂಬರ್ 8ರಂದು ಫೈನಲ್ ಪಂದ್ಯ ನಡೆಯುವ ಮೂಲಕ ಮುಕ್ತಾಯಗೊಳ್ಳಲಿದೆ.
ಯುಎಇನಲ್ಲಿ ಪ್ರಸಕ್ತ ಸಾಲಿನ ಟೂರ್ನಿ ನಡೆಸಲು ನಿರ್ಧರಿಸುವುದಾಗಿ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದು, ಅದಕ್ಕಾಗಿ ಮುಂದಿನ ವಾರ ಬಿಸಿಸಿಐ ಆಡಳಿತ ಮಂಡಳಿ ಸಭೆ ನಡೆಸಿ ವೇಳಾಪಟ್ಟಿ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.ಈಗಾಗಲೇ ಎಲ್ಲ ಪ್ರಾಂಚೈಸಿಗಳಿಗೆ ಇದಕ್ಕೆ ಸಂಬಂಧಿಸಿದಂತೆ ಅನೌಪಚಾರಿಕವಾಗಿ ಬಿಸಿಸಿಐ ಮಾಹಿತಿ ನೀಡಿದ್ದು, 51 ದಿನಗಳ ಕಾಲ ಹೊಡಿಬಡಿ ಆಟ ನಡೆಯಲಿದೆ.
ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಐಪಿಎಲ್ ನಡೆಸುವ ಉದ್ದೇಶದಿಂದ ಅದೇ ತಿಂಗಳ ಆಯೋಜನೆಗೊಳ್ಳಬೇಕಾಗಿದ್ದ ಟಿ-20 ವಿಶ್ವಕಪ್ ಟೂರ್ನಾಮೆಂಟ್ ಮುಂದೂಡಿಕೆಯಾಗಿದ್ದು, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಟೂರ್ನಾಮೆಂಟ್ ವೀಕ್ಷಣೆ ಮಾಡಲು ಪ್ರೇಕ್ಷಕರಿಗೆ ಅವಕಾಶ ನೀಡುವ ವಿಚಾರವಾಗಿ ದುಬೈ ಸರ್ಕಾರ ನಿರ್ಧಾರ ಕೈಗೊಳ್ಳಲಿದ್ದು, ಸಾಮಾಜಿಕ ಅಂತರ ಕಡ್ಡಾಯವಾಗಿರಲಿದೆ ಎಂದಿದ್ದಾರೆ. ಯುಎಇನಲ್ಲಿ ಮೂರು ಮೈದಾನಗಳು ಲಭ್ಯವಿದ್ದು, ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ, ಶೇಖ್ ಜಾಯೆದ್ ಮೈದಾನ ಹಾಗೂ ಶಾರ್ಜಾ ಮೈದಾನದಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ಫೈನಲ್ ಸೇರಿದಂತೆ 60 ಪಂದ್ಯಗಳು 51 ದಿನಗಳ ಕಾಲ ನಡೆಯಲಿದ್ದು, ಯಾವುದೇ ಪಂದ್ಯ ಕಡಿತಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗಲು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಅನುಮತಿ ನೀಡಿದ್ದು, ಆದರೆ ಟೂರ್ನಿಯಲ್ಲಿ ಭಾಗಿಯಾಗುವುದು ಬಿಡುವುದು ಕ್ರಿಕೆಟರ್ಸ್ಗೆ ಬಿಟ್ಟಿರುವ ವಿಚಾರ ಎಂದು ಅಲ್ಲಿನ ಮಂಡಳಿ ತಿಳಿಸಿದೆ.