ಮೆಲ್ಬೋರ್ನ್ : ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ ಆಟಗಾರ ಟಿ.ನಟರಾಜನ್ ಟೆಸ್ಟ್ ತಂಡ ಸೇರಿಕೊಂಡಿದ್ದಕ್ಕೆ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಯಶಸ್ಸಿನ ನಂತರ ಟೀಂ ಇಂಡಿಯಾಕ್ಕೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದ ನಟರಾಜನ್ ಟಿ-20, ಏಕದಿನ ನಂತರ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ನಟರಾಜನ್ ಟಿ-20 ಪಂದ್ಯಗಳಲ್ಲಿ ಸಾಧಿಸಿದ ರೀತಿಯ ಯಶಸ್ಸನ್ನು ಟೆಸ್ಟ್ ಪಂದ್ಯಗಲ್ಲಿ ಸಾಧಿಸಬಹುದೇ ಎಂದು ಕೇಳಿದಾಗ, ಡೇವಿಡ್ ವಾರ್ನರ್ ಆಸಕ್ತಿದಾಯಕ ಉತ್ತರ ನೀಡಿದ್ದಾರೆ.
"ಒಳ್ಳೆಯ ಪ್ರಶ್ನೆ, ಆದರೆ ನನಗೆ ತುಂಬಾ ಖಚಿತವಿಲ್ಲ. ನೀವು ನಟರಾಜನ್ ರಣಜಿ ಟ್ರೋಫಿ ಅಂಕಿ-ಅಂಶಗಳನ್ನು ಗಮಿನಿಸಿದರೆ ಅವರು ದಿನ ಆರಂಭ ಮತ್ತು ದಿನದ ಅಂತ್ಯದಲ್ಲಿ ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತೀರಿ. ಅವರ ಲೈನ್ ಮತ್ತು ಲೆನ್ತ್ ಉತ್ತಮವಾಗಿದೆ ಎಂದು ನನಗೆ ಗೊತ್ತಿದೆ. ಆದರೆ, ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಓವರ್ನಲ್ಲಿ ಅದನ್ನು ಹೇಗೆ ಮುಂದುವರೆಸುತ್ತಾರೆ ಎಂಬ ಬಗ್ಗೆ ನನಗೆ ನೂರಕ್ಕೆ ನೂರರಷ್ಟು ಖಚಿತತೆ ಇಲ್ಲ" ಎಂದು ಹೇಳಿದ್ದಾರೆ.
"ಸಿರಾಜ್ ಬಗ್ಗೆ ನನಗೆ ಸ್ವಲ್ಪ ತಿಳಿದಿದೆ ಮತ್ತು ಅವರು ರಣಜಿ ಟ್ರೋಫಿಯಲ್ಲಿ ಉತ್ತಮವಾದ ಪ್ರದರ್ಶನ ತೋರಿದ್ದಾರೆ. ಅವರು ಪುನರಾವರ್ತಿತ ಓವರ್‌ಗಳೊಂದಿಗೆ ಬ್ಯಾಕಪ್ ಮಾಡುತ್ತಾರೆ. ಸಿರಾಜ್ ಅವರ ಚೊಚ್ಚಲ ಪಂದ್ಯ ನೋಡಿ ಅವರ ಬಗ್ಗೆ ಭರವಸೆ ಹೊಂದಿದ್ದೇನೆ. ನಟರಾಜನ್ ಟೆಸ್ಟ್ ತಂಡ ಸೇರಿಕೊಂಡರೆ ಅವರೂ ಕೂಡ ಅದೇ ರೀತಿಯ ಪ್ರದರ್ಶನ ತೋರಲು ಸಾಧ್ಯವಾಗುತ್ತದೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
"ಮೊದಲನೇ ಮಗುವಿನ ಜನನದ ಸಮಯದಲ್ಲಿ ಅಲ್ಲಿರದೆ ನೆಟ್ಬೌಲರ್ ಆಗಿ ಆಸ್ಟ್ರೇಲಿಯಾಕ್ಕೆ ಆಗಮಿಸಿದ ನಟರಾಜನ್ ಮೂರೂ ಫಾರ್ಮೆಟ್ನಲ್ಲಿ ಕಣಕ್ಕಿಳಿಯುವ ಅವಕಾಶ ಗಿಟ್ಟಿಸಿಕೊಂಡಿದ್ದು ನಿಜಕ್ಕೂ ಆತನ ಪಾಲಿಗೆ ದೊಡ್ಡ ಪ್ರತಿಫಲವಾಗಿದೆ" ಎಂದು ತಿಳಿಸಿದ್ದಾರೆ.
ಅವರು ತುಂಬಾ ಒಳ್ಳೆಯ ಬೌಲರ್. ಹೈದರಾಬಾದ್ ತಂಡದ ನಾಯಕನಾಗಿದ್ದಾಗ ನಾನು ಅದನ್ನು ನೋಡಿದ್ದೇನೆ. ನಾನು ನಟರಾಜನ್ಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.