ಹೈದರಾಬಾದ್: ಕೊರೊನಾ ಸೋಂಕಿನಿಂದಾಗಿ ಇತರ ಎಲ್ಲ ಕ್ರೀಡೆಗಳಂತೆ ಕ್ರಿಕೆಟ್ ಕೂಡ ಸ್ಥಗಿತಗೊಂಡಿದೆ. ಆರೋಗ್ಯ ಬಿಕ್ಕಟ್ಟಿನಿಂದಾಗಿ ಭಾರತೀಯ ಕ್ರಿಕೆಟ್ ತಂಡದ ವೇಳಾಪಟ್ಟಿ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ.
ಟೀಂ ಇಂಡಿಯಾ ಕೊನೆಯದಾಗಿ ಫೆಬ್ರವರಿ 29 ರಂದು ನ್ಯೂಜಿಲ್ಯಾಂಡ್ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯ ಆಡಿತ್ತು. ಕೊರೊನಾ ಭೀತಿಯಿಂದಾಗಿ ತವರಿನಲ್ಲಿ ಆಯೋಜನೆಗೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ರದ್ದುಗೊಳಿಸಲಾಗಿತ್ತು. ಕಳೆದ ಎರಡೂವರೆ ತಿಂಗಳಿನಿಂದ ಟೀಂ ಇಂಡಿಯಾ ಆಟಗಾರರು ಯಾವುದೇ ಕ್ರಿಕೆಟ್ ಪಂದ್ಯವಾಡಿಲ್ಲ. ಲಾಕ್ಡೌನ್ ಪರಿಣಾಮ ಮನೆಯಲ್ಲೇ ಉಳಿದುಕೊಂಡಿದ್ದು, ಆಟಗಾರರ ಫಿಟ್ನೆಸ್ ಬಗ್ಗೆ ಪ್ರಶ್ನೆ ಶುರುವಾಗಿದೆ.
![new challenge to Indian cricketers](https://etvbharatimages.akamaized.net/etvbharat/prod-images/06india1_1905newsroom_1589881288_1047.jpg)
ಆದಾಗ್ಯೂ, ಆಟಗಾರರು ತಮ್ಮ ಫಿಟ್ನೆಸ್ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ಬಹುತೇಕ ಎಲ್ಲ ಆಟಗಾರರು ಮನೆಯಲ್ಲೇ ವ್ಯಾಯಾಮ, ಜಿಮ್ ಮಾಡುತ್ತಿದ್ದಾರೆ. ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ, ಶಿಖರ್ ಧವನ್, ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ಮನೆಯಲ್ಲೆ ವರ್ಕೌಟ್ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್, ವೃತ್ತಿಪರ ಕ್ರೀಡಾಪಟು ಓಟದ ಕುದುರೆಯಂತೆ ಎಂದಿದ್ದಾರೆ. ನೀವು ಎಷ್ಟು ಸಮಯದವರೆಗೆ ಓಟದ ಕುದುರೆಯನ್ನು ಕಟ್ಟಿಹಾಕಬಹುದು? ಆ ಕುದುರೆ ಓಡಲೇ ಬೇಕು. ಏಕೆಂದರೆ ಅದಕ್ಕೆ ತಿಳಿದಿರುವುದು ಓಟ ಮಾತ್ರ ಎಂದಿದ್ದಾರೆ. ಒಂದು ಬಾರಿ ಕ್ರಿಕೆಟ್ ಚಟುವಟಿಕೆಗಳು ಪ್ರಾರಂಭವಾದರೆ ರನ್ನಿಂಗ್, ಯೋ-ಯೋ ಟೆಸ್ಟ್ ಸೇರಿದಂತೆ ಎಲ್ಲಾ ತರಬೇತಿಗಳು ಪ್ರಾರಂಭವಾಗುತ್ತವೆ.
ಅಂತಾರಾಷ್ಟ್ರೀಯ ಸರಣಿಯ ಮೊದಲು, ತಂಡಕ್ಕೆ ಕನಿಷ್ಠ ಆರು ವಾರಗಳವರೆಗೆ ತರಬೇತಿ ನೀಡಲು ಎಂದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಹೀಗಾಗಿ ಆಟಗಾರರು ಹಿಂದಿನಂತೆ ಲಯಕ್ಕೆ ಮರಳಬಹುದು ಎನ್ನಲಾಗಿದೆ.