ಮುಂಬೈ: ಆಸೀಸ್ ಪ್ರವಾಸಕ್ಕೆ ಆಯ್ಕೆಯಾಗದಿದ್ದಾಗ ಪದಗಳಲ್ಲಿ ಹೇಳಲಾಗದಷ್ಟು ಕೋಪಗೊಂಡಿದ್ದೆ. ಆದರೆ, ರೋಹಿತ್ ಶರ್ಮಾ ಜೊತೆ ಮಾತನಾಡಿದ ನಂತರ ಸಮಾಧಾನವಾಯಿತೆಂದು ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದಲೂ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಸ್ಥಿರ ಪ್ರದರ್ಶನ ತೋರುತ್ತಿರುವ ಸೂರ್ಯಕುಮಾರ್ ಯಾದವ್ರನ್ನು ಬಿಸಿಸಿಐ ಆಯ್ಕೆ ಸಮಿತಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಷೋಷಣೆ ಮಾಡಿದ್ದ ಮೂರು ಮಾದರಿಯ ತಂಡದಲ್ಲೂ ಅವಕಾಶ ನೀಡಿರಲಿಲ್ಲ. ಈ ವೇಳೆ ಹತಾಷೆ, ಕೋಪಕ್ಕೊಳಗಾಗಿದ್ದ ಸೂರ್ಯಕುಮಾರ್ ಯಾದವ್, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಜೊತೆ ಒಂದು ಸಣ್ಣ ಮಾತುಕತೆ ನಡೆಸಿದ ನಂತರ ಮನಸು ಹಗುರವಾಯಿತು ಎಂದು ಹೇಳಿದ್ದಾರೆ.
ಆ ಸಮಯದಲ್ಲಿ ನಾನು ಜಿಮ್ನಲ್ಲಿದ್ದೆ, ರೋಹಿತ್ ನನ್ನ ಪಕ್ಕ ಕುಳಿತು ಒಮ್ಮೆ ನನ್ನತ್ತ ನೋಡಿದರು, ನಿಸ್ಸಂಶಯವಾಗಿ ಅವರೂ ಕೂಡ ಬೇಸರದಲ್ಲಿದ್ದರು. ಯಾಕೆಂದರೆ, ನನಗೆ ಈ ಬಾರಿ ಒಳ್ಳೆಯ ಸುದ್ದಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಅವರೂ ಕೂಡ ಇದ್ದರು ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
![ರೋಹಿತ್ ಶರ್ಮಾ](https://etvbharatimages.akamaized.net/etvbharat/prod-images/2020-11-07-6_2211newsroom_1606038934_761.jpg)
ನಂತರ ಅವರು, "ನೀನು ತಂಡಕ್ಕಾಗಿ ಉತ್ತಮ ಕೆಲಸ ಮಾಡುತ್ತಿರುವೆ ಎಂದು ನಾನು ನಂಬಿದ್ದೇನೆ, ಆಯ್ಕೆಯಾಗದಿರುವುದನ್ನೇ ಯೋಚಿಸುವ ಬದಲು, ಐಪಿಎಲ್ನಲ್ಲಿ ಈಗ ತಂಡಕ್ಕಾಗಿ ನೀನು ಏನು ಮಾಡುತ್ತಿರುವೆಯೋ, ಅದನ್ನು ಮುಂದುವರಿಸು. ಸಮಯ ಸರಿಯಾದಾಗ ಅವಕಾಶಗಳು ನಿನ್ನತ್ತ ಬರುತ್ತವೆ. ಇವತ್ತಿರಬಹುದು ಅಥವಾ ನಾಳೆಯಾಗಿರಬಹುದು, ಕೇವಲ ನಿನ್ನನ್ನು ನೀನು ನಂಬು ಎಂದು ಹೇಳಿದರು" ಎಂಬುದನ್ನ ಸೂರ್ಯಕುಮಾರ್ ನೆನೆಪಿಸಿಕೊಂಡಿದ್ದಾರೆ.
ರೋಹಿತ್ ಹೇಳಿದ ಆ ಒಂದೆರಡು ಮಾತುಗಳು ನನಗೆ ಬೇಸರದಿಂದ ಹೊರಬರಲು ನೆರವಾಯಿತು ಎಂದು ಸೂರ್ಯ ಹೇಳಿದ್ದಾರೆ. "ಆ ಸಂದರ್ಭದಲ್ಲಿ ನಾನು ರೂಮಿನಲ್ಲಿ ಕುಳಿತು ನಾನು ಏಕೆ ಆಯ್ಕೆಯಾಗಲಿಲ್ಲ ಎಂದು ಆಲೋಚಿಸಿದೆ. ಬಿಸಿಸಿಐ ಘೋಷಿಸಿದ ತಂಡವನ್ನು ಒಮ್ಮೆ ನೋಡಿದೆ. ಅದರಲ್ಲಿದ್ದವರೆಲ್ಲ ಸಾಕಷ್ಟು ರನ್ ಗಳಿಸಿದ್ದರು ಹಾಗೂ ಭಾರತ ತಂಡಕ್ಕಾಗಿ ಸ್ಥಿರ ಪ್ರದರ್ಶನ ತೋರಿದ್ದವರಾಗಿದ್ದರು.
ಐಪಿಎಲ್ನಲ್ಲೂ ಉತ್ತಮ ಪ್ರದರ್ಶನ ತೋರಿದ್ದರು. ನಂತರ ನಾನು ಅದರ ಬಗ್ಗೆ ಚಿಂತಿಸುವುದನ್ನು ಬಿಟ್ಟು, ತಂಡಕ್ಕಾಗಿ ರನ್ಗಳಿಸುವುದರ ಕಡೆ ಗಮನ ನೀಡಿದೆ. ನನ್ನ ಕೈಯಲ್ಲಿರುವ, ನನ್ನ ಕಂಟ್ರೋಲ್ನಲ್ಲಿರುವ ಕೆಲಸವನ್ನು ಮಾಡಲು ಸಿದ್ಧವಾದೆ. ಯಾವಾಗ ಅವಕಾಶ ಬರುತ್ತದೋ ಆವಾಗ ಅದನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.