ನವದೆಹಲಿ: ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮತ್ತು ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಜಗಳವಾಡುವುದನ್ನು ನಿಲ್ಲಿಸಬೇಕು ಎಂದು ಪಾಕಿಸ್ತಾನ ಬೌಲಿಂಗ್ ಕೋಚ್ ವಕಾರ್ ಯೂನಿಸ್ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದೇನೆ, ಅದು ಅಸಹ್ಯಕರವಾಗಿದೆ ಎಂದು ಯೂನಿಸ್ ಹೇಳಿದ್ದಾರೆ. 'ಗೌತಮ್ ಗಂಭೀರ್ ಮತ್ತು ಶಾಹಿದ್ ಅಫ್ರಿದಿ ನಡುವಿನ ವಾಗ್ದಾಳಿ ಬಹಳ ಸಮಯದಿಂದ ನಡೆಯುತ್ತಿದೆ. ಅವರಿಬ್ಬರೂ ಶಾಂತವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಶಾಂತವಾಗಲು ಸಾಧ್ಯವಾಗದಿದ್ದರೆ ಪ್ರಪಂಚದ ಯಾವುದಾದರೊಂದು ಭಾಗದಲ್ಲಿ ಭೇಟಿಯಾಗಿ ಮಾತನಾಡಿ' ಎಂದು ಸಲಹೆ ನೀಡಿದ್ದಾರೆ.
ಜಾಲತಾಣದಲ್ಲಿ ನಿಮ್ಮ ಜಗಳ ಮುಂದುವರಿದರೆ ಜನರು ಅದನ್ನು ಆನಂದಿಸುತ್ತಾರೆ. ಇಬ್ಬರೂ ಸಂವೇದನಾಶೀಲರಾಗಬೇಕು ಎಂದು ಭಾವಿಸುತ್ತೇನೆ ಅಂತ ವಕಾರ್ ಯೂನಿಸ್ ಹೇಳಿದ್ದಾರೆ.
ಉಭಯ ದೇಶಗಳು ಕೊನೆಯ ಬಾರಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಿದ್ದು, 2012 - 13 ರಲ್ಲಿ. ದ್ವಿಪಕ್ಷೀಯ ಸಂಬಂಧಗಳ ಪುನಾರಂಭದ ಕುರಿತು ಮಾತನಾಡಿದ ವಕಾರ್, 'ನೀವು ಹೋಗಿ ಪಾಕಿಸ್ತಾನ ಮತ್ತು ಭಾರತ ಪರಸ್ಪರ ಆಡಬೇಕೆ? ಎಂದು ಎರಡೂ ದೇಶಗಳ ಜನರನ್ನು ಕೇಳಿದರೆ, ಸುಮಾರು 95 ರಷ್ಟು ಜನರು ಹೌದು ಎನ್ನುತ್ತಾರೆ. ಎರಡೂ ದೇಶಗಳ ನಡುವೆ ಕ್ರಿಕೆಟ್ ನಡೆಯಬೇಕು ಎಂದು ಹೇಳಿದ್ದಾರೆ.
'ಇಮ್ರಾನ್-ಕಪಿಲ್ ಸರಣಿ' ಅಥವಾ 'ಸ್ವಾತಂತ್ರ್ಯ ಸರಣಿ' ಅಥವಾ ಯಾವುದೇ ಹೆಸರಿಟ್ಟರೂ ಅದು ವಿಶ್ವದ ಅತಿದೊಡ್ಡ ಹಿಟ್ ಆಗುತ್ತದೆ ಎಂದು ನಾನು ಭಾವಿಸುತ್ತೇನೆ. ಭಾರತ ಮತ್ತು ಪಾಕಿಸ್ತಾನ, ಕ್ರಿಕೆಟ್ ಪ್ರಿಯರನ್ನು ಕಳೆದುಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ನಿಯಮಿತವಾಗಿ ಕ್ರಿಕೆಟ್ ಆಡಬೇಕು ಎಂದು ವಕಾರ್ ಯೂನಿಸ್ ಅಭಿಪ್ರಾಯಪಟ್ಟಿದ್ದಾರೆ.