ಬೆಂಗಳೂರು: ವಿಶ್ವಕಪ್ ವಿಜೇತ ತಂಡದ ಭಾಗವಾಗಲು ಬಯಸುತ್ತೇನೆ ಎಂದಿರುವ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಕಂಬ್ಯಾಕ್ ಮಾಡುವತ್ತ ಗಮನ ಹರಿಸಿರುವುದಾಗಿ ಹೇಳಿದ್ದಾರೆ.
ಟೆಸ್ಟ್ ಬೌಲಿಂಗ್ ಶ್ರೇಣಿಯ ಪ್ರಮುಖ ವೇಗಿ ಎಂದು ಪರಿಗಣಿಸಲ್ಪಟ್ಟಿರುವ ಇಶಾಂತ್ ಅವರು ಕೊನೆಯ ಬಾರಿಗೆ 2016ರ ಜನವರಿಯಲ್ಲಿ ಏಕದಿನ ಪಂದ್ಯವನ್ನು ಆಡಿದ್ದಾರೆ. ಅವರು ಇಲ್ಲಿಯವರೆಗೆ 80 ಏಕದಿನ ಪಂದ್ಯಗಳನ್ನು ಆಡಿದ್ದು, 30.98 ಸರಾಸರಿಯಲ್ಲಿ 115 ವಿಕೆಟ್ ಗಳಿಸಿದ್ದಾರೆ. ಇತ್ತೀಚೆಗೆ ಟೆಸ್ಟ್ ಸರಣಿಯಲ್ಲಿ ಸ್ಪೀಡ್ ಸ್ಟಾರ್ ಉತ್ತಮ ಪ್ರದರ್ಶನ ತೋರಿದ್ದಾರೆ.
ನಿಸ್ಸಂಶಯವಾಗಿ, ನಾನು ವಿಶ್ವಕಪ್‌ನಲ್ಲಿ ಆಡಲು ಇಷ್ಟಪಡುತ್ತೇನೆ. ವಾಸ್ತವವಾಗಿ, ನಾನು ವಿಶ್ವಕಪ್ ವಿಜೇತ ತಂಡದ ಭಾಗವಾಗಲು ಬಯಸುತ್ತೇನೆ, ಏಕೆಂದರೆ ಇದೊಂದು ವಿಭಿನ್ನ ಭಾವನೆಯಾಗಿರುತ್ತದೆ. ನಾವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಡುತ್ತಿದ್ದೇವೆ, ಅದು ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವಕಪ್ ಇದ್ದಂತೆ. ಆದರೆ, ಹೆಚ್ಚಿನ ಜನರು ಇದನ್ನು ಫಾಲೋ ಮಾಡುವುದಿಲ್ಲ, ಏಕದಿನ ವಿಶ್ವಕಪ್ ಅನ್ನು ವ್ಯಾಪಕವಾಗಿ ಫಾಲೋ ಮಾಡಲಾಗುತ್ತದೆ ಎಂದು ಕ್ರೀಡಾ ವೆಬ್ಸೈಟ್ಗೆ ಇಶಾಂತ್ ಹೇಳಿದ್ದಾರೆ.
31 ವರ್ಷದ ಬಲಗೈ ವೇಗಿ 97 ಟೆಸ್ಟ್ ಆಡಿದ್ದು, 32.39 ಸರಾಸರಿಯಲ್ಲಿ 297 ವಿಕೆಟ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳ ಕ್ಲಬ್‘ ಸೇರಲು ಇಶಾಂತ್ಗೆ ಕೇವಲ ಮೂರು ವಿಕೆಟ್ ಬೇಕಿದೆ.
ಎಂ.ಎಸ್. ಧೋನಿ ಯಾವಾಗಲೂ ನನ್ನನ್ನು ಬೆಂಬಲಿಸುತ್ತಿದ್ದರು. ನನ್ನ ಮೊದಲ 50 - 60 ಟೆಸ್ಟ್ ಪಂದ್ಯಗಳ ನಂತರವೂ, ನಿಮ್ಮ ಸ್ಥಾನವನ್ನು ಬದಲಿಸಲು ನಾವು ಬೇರೆಯವರನ್ನು ಹುಡುಕುತ್ತೇವೆ ಅಂತ ಅವರು ಎಂದಿಗೂ ಹೇಳಲಿಲ್ಲ. ನಿಮಗೆ ಸತ್ಯವನ್ನು ಹೇಳುವುದಾದರೆ, 97 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರವೂ ನನಗೆ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಬಗ್ಗೆ ಅರ್ಥವಾಗುತ್ತಿಲ್ಲ. ನಾನು ಈ ವಿಷಯಗಳ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳಲಿಲ್ಲ. ನನಗೆ ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಅವುಗಳನ್ನು ಏಕೆ ಅವಲಂಬಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಇದು ಕೇವಲ ಒಂದು ಸಂಖ್ಯೆ ಅಷ್ಟೇ ಅಲ್ಲವಾ ಎಂದು ಪ್ರತಿಕ್ರಿಯಿಸಿದ್ದಾರೆ.