ಆ್ಯಂಟಿಗೋವಾ: ನಾಯಕನಾಗಿ ಬಹುಬೇಗ ಯಶಸ್ಸು ಕಂಡಿರುವ ವಿರಾಟ್ ಕೊಹ್ಲಿ ಈಗಾಗಲೇ ಟೆಸ್ಟ್ ಕಪ್ತಾನನಾಗಿ 26 ಜಯ ಸಾಧಿಸಿದ್ದು, ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಗೆದ್ದರೆ ಎಂಎಸ್ ಧೋನಿ ದಾಖಲೆ ಮುರಿಯಲಿದ್ದಾರೆ.
ಡಿಸೆಂಬರ್ 30, 2014ರಲ್ಲಿ ಧೋನಿ ಟೆಸ್ಟ್ ತಂಡದ ನಾಯಕತ್ವಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ ನಂತರ ತಂಡದ ಜವಾಬ್ದಾರಿ ವಹಿಸಿಕೊಂಡ ಕೊಹ್ಲಿ, 46 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 26 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 60 ಪಂದ್ಯಗಳಲ್ಲಿ ತಂಡದ ನೇತೃತ್ವವಹಿಸಿಕೊಂಡಿದ್ದು, 27 ಜಯ ತಂದುಕೊಟ್ಟಿದ್ದಾರೆ. ಸೌರವ್ ಗಂಗೂಲಿ 49 ಪಂದ್ಯಗಳಲ್ಲಿ ನಾಯಕನಾಗಿದ್ದು 21ರಲ್ಲಿ ಜಯ ತಂದುಕೊಟ್ಟಿದ್ದಾರೆ. ಮೊಹ್ಮದ್ ಅಜರುದ್ಧೀನ್ 47 ಪಂದ್ಯಗಳಲ್ಲಿ ನಾಯಕನಾಗಿದ್ದು, 14 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಜಯ ತಂದು ಕೊಟ್ಟಿದ್ದಾರೆ.
ಅತಿಹೆಚ್ಚು ಗೆಲುವು ತಂದುಕೊಟ್ಟಿರುವ ನಾಯಕರಲ್ಲಿ ದಕ್ಷಿಣ ಆಫ್ರಿಕಾದ ಗ್ರೆಮ್ ಸ್ಮಿತ್ ಇದ್ದು, 109 ಟೆಸ್ಟ್ಗಳಲ್ಲಿ ತಂಡದ ನಾಯಕ 53 ಜಯ ಕಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಇದ್ದು, ಇವರು 77 ಪಂದ್ಯಗಳಲ್ಲಿ ನಾಯಕನಾಗಿದ್ದು 48 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟಿವ್ ವಾ ಇದ್ದು ಅವರ ನೇತೃತ್ವದಲ್ಲಿ 41 ಜಯ, ನಾಲ್ಕನೇ ಸ್ಥಾನದಲ್ಲಿರುವ ವಿಂಡೀಸ್ನ ಕ್ಲೈವ್ ಲಾಯ್ಡ್ 36 ಜಯ ತಂದುಕೊಟ್ಟಿದ್ದಾರೆ.