ಅಹ್ಮದಾಬಾದ್: ಈಗಾಗಲೇ ಭಾರತ ತಂಡದ ಯಶಸ್ವಿ ಟೆಸ್ಟ್ ನಾಯಕನಾಗಿರುವ ವಿರಾಟ್ ಕೊಹ್ಲಿ ಗುರುವಾರದಿಂದ ಅಹ್ಮದಾಬಾದ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ನಲ್ಲಿ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ನಾಯಕ ಎಂಬ ದಾಖಲೆಯನ್ನು ಎಂ.ಎಸ್.ಧೋನಿ ಜೊತೆಗೆ ಹಂಚಿಕೊಳ್ಳಲಿದ್ದಾರೆ.
ಮಾರ್ಚ್ 4ರಿಂದ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 4 ಪಂದ್ಯಗಳ ಸರಣಿಯ ಕೊನೆ ಟೆಸ್ಟ್ ಪಂದ್ಯ ನಡೆಯಲಿದೆ. ಈಗಾಗಲೆ 2-1ರಲ್ಲಿ ಸರಣಿ ಮುನ್ನಡೆ ಪಡೆದುಕೊಂಡಿರುವ ಭಾರತ ಈ ಪಂದ್ಯವನ್ನು ಗೆದ್ದು ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶವನ್ನು ಖಚಿತ ಪಡಿಸಿಕೊಳ್ಳಲಿದೆ.
ಮಾಜಿ ನಾಯಕ ಧೋನಿ 60 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿ ಭಾರತ ತಂಡವನ್ನು 59 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ನಾಳಿನ ಪಂದ್ಯ ಕೊಹ್ಲಿ ಪಾಲಿಗೆ 60ನೇ ಪಂದ್ಯವಾಗಲಿದೆ.
ಇನ್ನು ಕೊಹ್ಲಿ 60 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 35 ಜಯ,14 ಸೋಲು ಹಾಗೂ 10 ಡ್ರಾ ಸಾಧಿಸಿದ್ದಾರೆ. ಧೋನಿ 60 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 27 ಜಯ ಹಾಗೂ 18 ಸೋಲು ಕಂಡಿದ್ದಾರೆ. 3ನೇ ಸ್ಥಾನದಲ್ಲಿರುವ ಸೌರವ್ ಗಂಗೂಲಿ 49 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿದ್ದು, 21 ಜಯ, 13 ಸೋಲು ಕಂಡಿದ್ದರೆ, 15 ಡ್ರಾನಲ್ಲಿ ಅಂತ್ಯಗೊಂಡಿದೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ ಇತಿಹಾಸಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರು 109 ಪಂದ್ಯಗಳಲ್ಲಿ ನಾಯಕರಾಗಿದ್ದು, 53 ಗೆಲುವು, 26 ಸೋಲು ಕಂಡಿದ್ದರೆ, 27 ಪಂದ್ಯಗಳು ಡ್ರಾ ಆಗಿವೆ.