ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದಲ್ಲಿ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಾಗಿ ಮಿಂಚುತ್ತಿದ್ದಾರೆ. ಇದೀಗ ಅಮೆರಿಕ ಅಧ್ಯಯನ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಕೊಹ್ಲಿ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಕ್ರಿಕೆಟರ್ ಎಂದು ತಿಳಿದು ಬಂದಿದೆ.
ಅಮೆರಿಕದ SEMrush ಎಂಬ ಅಧ್ಯಯನ ಸಂಸ್ಥೆಯ ಪ್ರಕಾರ ವಿರಾಟ್ ಕೊಹ್ಲಿ ಹೆಸರನ್ನು ಜನವರಿಯಿಂದ ಜೂನ್ ತಿಂಗಳವರೆಗೆ ಪ್ರತಿ ತಿಂಗಳು ಸುಮಾರು 16.2 ಲಕ್ಷ ಬಾರಿ ಆನ್ಲೈನ್ನಲ್ಲಿ ಹುಡುಕಲಾಗಿದೆ. ಭಾರತ ತಂಡವನ್ನು ಕೂಡ ಈ ಅವಧಿಯಲ್ಲಿ ಪ್ರತಿ ತಿಂಗಳು 2.4 ಲಕ್ಷ ಬಾರಿ ಆನ್ಲೈನ್ ಸರ್ಚ್ ಮಾಡಲಾಗಿದೆ.
ಕೊಹ್ಲಿ ನಂತರದ ಸ್ಥಾನದಲ್ಲಿ ಭಾರತ ತಂಡದ ಉಪ ನಾಯಕ ರೋಹಿತ್ ಶರ್ಮಾ(9.7), ಎಂ.ಎಸ್.ಧೋನಿ(9.4), ಹಾರ್ದಿಕ್ ಪಾಂಡ್ಯ(6.7), ಸಚಿನ್ ತೆಂಡೂಲ್ಕರ್(5.4) ಮತ್ತು ಶ್ರೇಯಸ್ ಅಯ್ಯರ್(3.4) ಇದ್ದಾರೆ.
ತಂಡಗಳ ಶ್ರೇಯಾಂಕದಲ್ಲಿ ಭಾರತದ ನಂತರ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್, ಶ್ರೀಲಂಕಾ, ಐರ್ಲೆಂಡ್, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆ ಪಡೆದುಕೊಂಡಿವೆ.
ಕ್ರಿಕೆಟ್ ಅಭಿಮಾನಿಗಳು ಪುರುಷರ ಜೊತೆಗೆ ಮಹಿಳಾ ಕ್ರಿಕೆಟರ್ಗಳನ್ನು ಸಹ ಹೆಚ್ಚು ಆನ್ಲೈನ್ನಲ್ಲಿ ಸರ್ಚ್ ಮಾಡಿದ್ದಾರೆ. ಆದರೆ ಅವರಲ್ಲಿ ಯಾರೂ ಟಾಪ್ 10ರ ಒಳಗೆ ಸ್ಥಾನ ಪಡೆದಿಲ್ಲ. ವರದಿಯ ಪ್ರಕಾರ ಭಾರತ ತಂಡದ ಸ್ಮೃತಿ ಮಂಧಾನ 12ನೇ ಸ್ಥಾನ ಹಾಗೂ ಆಸ್ಟ್ರೇಲಿಯಾದ ಆಲ್ರೌಂಡರ್ ಎಲಿಸ್ ಪೆರ್ರಿ 20 ಸ್ಥಾನ ಪಡೆದಿದ್ದಾರೆ. ಆದರೆ ಇವರು ಯುವರಾಜ್ ಸಿಂಗ್, ಶಿಖರ್ ಧವನ್ ಅವರಿಗಿಂತ ಹೆಚ್ಚು ಶ್ರೇಯಾಂಕ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.