ನವದೆಹಲಿ: ದಿನದಿಂದ ದಿನಕ್ಕೆ ಭಾರತದಲ್ಲಿ ಕೊರೊನಾ ರೌದ್ರನರ್ತನವಾಡುತ್ತಿದ್ದು, ಹೀಗಾಗಿ ಮುಂದಿನ ಕೆಲ ತಿಂಗಳ ಕಾಲ ಭಾರತದಲ್ಲಿ ಯಾವುದೇ ಕ್ರೀಡಾಕೂಟ ನಡೆಯುವುದು ಬಹುತೇಕ ಸಂದೇಹ. ಇದೇ ಕಾರಣಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡ ಮುಂದೂಡಿಕೆಯಾಗಿದೆ.
ಮಾರ್ಚ್ 29ರಿಂದ ಆರಂಭಗೊಳ್ಳಬೇಕಾದ ಪ್ರಸಕ್ತ ಸಾಲಿನ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾ ವೈರಸ್ ಭೀತಿಯಿಂದಾಗಿ ಮುಂದೂಡಿಕೆಯಾಗಿದ್ದು, ಇಲ್ಲಿಯವರೆಗೆ ಮರುವೇಳಾಪಟ್ಟಿ ಕೂಡ ನಿಗದಿಯಾಗಿಲ್ಲ. ಹೀಗಾಗಿ ಇದರ ಉಪಯೋಗ ಪಡೆದುಕೊಳ್ಳಲು ಮುಂದಾಗಿರುವ ಯುಎಇ ಈ ಸಲದ ಐಪಿಎಲ್ ನಡೆಸಲು ನಾವು ಸಿದ್ಧ ಎಂದಿದೆ.
ಈಗಾಗಲೇ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕೂಡ ಐಪಿಎಲ್ ನಡೆಸಲು ಸಿದ್ಧ ಎಂದು ಹೇಳಿದ್ದು, ಇದೀಗ ದುಬೈ ಕೂಡ ಟೂರ್ನಿ ನಡೆಸಲು ಮುಂದೆ ಬಂದಿದೆ. ಆದರೆ ಇದಕ್ಕ ಸಂಬಂಧಿಸಿದಂತೆ ಬಿಸಿಸಿಐ ಯಾವುದೇ ಉತ್ತರ ಹೊರಹಾಕಿಲ್ಲ. ಬಿಸಿಸಿಐ ಖಂಜಾಚಿ ಆಗಿರುವ ಅರುಣ್ ದುಮ್ಲಾ ಇದರ ಬಗ್ಗೆ ಮಾತನಾಡಿದ್ದು, ಯುಎಇ ಕೂಡ ಟೂರ್ನಿ ನಡೆಸಲು ಮುಂದೆ ಬಂದಿದೆ ಎಂದಿದೆ. ಆದರೆ ವಿದೇಶಗಳಿಗೂ ಹೋಗಲು ಈಗಾಗಲೇ ಎಲ್ಲ ವಿಮಾನ ಬ್ಯಾನ್ ಮಾಡಿರುವ ಕಾರಣ ಇದು ಅಸಾಧ್ಯ ಎಂದಿದೆ.
ಈ ಹಿಂದೆ 2009 ಹಾಗೂ 2014ರ ವೇಳೆ ವಿದೇಶಗಳಲ್ಲಿ ಬಿಸಿಸಿಐ ಐಪಿಎಲ್ ನಡೆಸಿದೆ. ಈ ಸಲ ಕೂಡ ಅಂತಹ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಬೇರೆ ಬೇರೆ ದೇಶಗಳಿಂದ ಪ್ಲೇಯರ್ಸ್ ಅಲ್ಲಿಗೆ ಬರಬೇಕಾದ ಕಾರಣ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಮಾತು ಕೇಳಿ ಬರುತ್ತಿವೆ.
ಐಪಿಎಲ್ ನಡೆಸುವ ಬಗ್ಗೆ ಚಿಂತನೆ ನಡೆಸಿಲ್ಲ: ಬಿಸಿಸಿಐ
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ದಿನಾಂಕ ಮರು ನಿಗದಿ ಪಡಿಸುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯಲ್ಲೂ ನಾವು ಚಿಂತನೆ ನಡೆಸಿಲ್ಲ. ದೇಶದಲ್ಲಿನ ಲಾಕ್ಡೌನ್ ಸಂಪೂರ್ಣವಾಗಿ ಮುಕ್ತಾಯಗೊಂಡ ಬಳಿಕ ಇದರ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಮೊಹಮ್ಮದ್ ಶಮಿ, ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ನಡೆಯುವುದು ಅನುಮಾನ ಎಂದು ಹೇಳಿದ್ದರು. ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಟೂರ್ನಿ ನಡೆಸುವುದು ಹೇಗೆ ಎಂಬ ಗೊಂದಲ ಬಿಸಿಸಿಐನಲ್ಲಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಾಂಚೈಸಿಗಳ ಜತೆ ಮಾತುಕತೆ ನಡೆಸಿರುವ ಬಿಸಿಸಿಐ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.