ಹೈದರಾಬಾದ್: ವಿಶ್ವಕಪ್ ಇತಿಹಾಸದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಜೂನ್ 17,1999 ಮರೆಯಲಾಗದ ದಿನ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ 1999 ವಿಶ್ವಕಪ್ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಸೆಮಿಫೈನಲ್ ಪಂದ್ಯವನ್ನಾಡಿದ್ದವು. ಈ ಪಂದ್ಯ ಫಲಿತಾಂಶ ಟೈ ಆದರೂ ಆಸ್ಟ್ರೇಲಿಯಾ ಫೈನಲ್ಗೇರಿತ್ತು,. ಹರಿಣಗಳಿಗೆ ಹೃದಯಾಘಾತದ ಜೊತೆಗೆ ಚೋಕರ್ಸ್ ಎಂಬ ಹಣೆಪಟ್ಟಿ ಕೂಡ ಮುಂದುವರಿದಿತ್ತು.
ಎಡ್ಬಾಸ್ಟನ್ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ಸವು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 68 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಆಪದ್ಬಾಂಧವ ಎನಿಸಿದ್ದ ಮೈಕಲ್ ಬೆವನ್(65) ಹಾಗೂ ನಾಯಕ ಸ್ಟೀವ್ ವಾ (56) ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ಇವರಿಬ್ಬರ ನೆರವಿನಿಂದ ಆಸ್ಟ್ರೇಲಿಯಾ 213 ರನ್‌ಗಳನ್ನು ದಾಖಲಿಸಿತು. ಪೊಲಾಕ್ ಹಾಗೂ ಡೊನಾಲ್ಡ್ ಕ್ರಮವಾಗಿ 5 ಹಾಗೂ 4 ವಿಕೆಟ್ ಪಡೆದರು.
214ರನ್‌ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ 13ನೇ ಓವರ್ ಹೊತ್ತಿಗೆ 48 ರನ್ ಗಳಿಸಿ ಒಂದೂ ವಿಕೆಟ್ ಕಳೆದುಕೊಳ್ಳದೆ ಉತ್ತಮ ಸ್ಥಿತಿಯಲ್ಲಿತ್ತು. ಶೇನ್ ವಾರ್ನ್ ಹರ್ಷೆಲ್ ಗಿಬ್ಸ್‌ಗೆ (30), ಗ್ಯಾರಿ ಕರ್ಸ್ಟನ್ ಹಾಗೂ ನಾಯಕ ಹ್ಯಾನ್ಸಿ ಕ್ರೋನಿಯೆ ವಿಕೆಟ್ ಪಡೆದರು. ನೋಡ ನೋಡುತ್ತಲೇ ದಕ್ಷಿಣ ಆಫ್ರಿಕಾ 61ಕ್ಕೆ 4 ವಿಕೆಟ್ ಕಳೆದುಕೊಂಡು ಕಷ್ಟಕ್ಕೆ ಸಿಲುಕಿತು. ಜಾಂಟಿ ರೋಡ್ಸ್ (43) ಹಾಗೂ ಜಾಕ್ ಕಾಲಿಸ್ (53) ರನ್ಗಳಿಸಿ 84 ರನ್‌ಗಳ ಜೊತೆಯಾಟ ನಡೆಸಿದರು. ರೋಡ್ಸ್ ಬೆವನ್‌ಗೆ ಕ್ಯಾಚಿತ್ತಾಗ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 58 ಎಸೆತಗಳಲ್ಲಿ 69 ರನ್ ಬೇಕಿತ್ತು. ನಂತರ ಕಾಲಿಸ್ ವಿಕೆಟ್ ಕಳೆದುಕೊಂಡಾಗ 31 ಎಸೆತಗಳಲ್ಲಿ 39 ರನ್‌ಗಳ ಅಗತ್ಯ ವಿತ್ತು.
ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ್ದ ಲಾನ್ಸ್ ಕ್ಲೂಸ್ನರ್ ಕ್ರೀಶ್ನಲ್ಲಿದ್ದರು. ಕೊನೆಯ 8 ಎಸೆತಗಳಲ್ಲಿ 16 ರನ್‌ಗಳು ಬೇಕಿದ್ದವು. ಮೆಕ್‌ಗ್ರಾತ್ 5 ಎಸೆತವನ್ನು ಸ್ಟ್ರೇಟ್ ಡೌನ್ ದಿ ಗ್ರೌಂಡ್ನಲ್ಲಿ ಸಿಕ್ಸರ್ ಬಾರಿಸಿದರು. ನಂತರದ ಡಸೆತವನ್ನು ಸಿಂಗಲ್ ತೆಗೆದುಕೊಂಡರು.
ಕೊನೆಯ ಓವರ್‌ನಲ್ಲಿ ಹರಿಣಗಳಿಗೆ ಗೆಲ್ಲಲು 9 ರನ್ ಬೇಕಿತ್ತು. ಉಳಿದಿದ್ದು ಒಂದೇ ಒಂದೇ ಒಂದು ವಿಕೆಟ್. ಫ್ಲೆಮಿಂಗ್ ಎಸೆದ ಮೊದಲ ಎಸೆತವನ್ನೇ ಕ್ಲೂಸ್ನರ್ ಕವರ್ಸ್ ದಿಕ್ಕಿನಲ್ಲಿ ಬೌಂಡರಿಗಟ್ಟಿದರು. ವೈಡ್ ಲಾಂಗ್ ಆಫ್‌ನತ್ತ ಎರಡನೇ ಎಸೆತವನ್ನೂ ಡ್ರೈವ್ ಮಾಡಿ ಸತತ ಎರಡನೇ ಬೌಂಡರಿ ಬಾರಿಸಿದಾಗ ಆಫ್ರಿಕನ್ ಪಾಳಯದಲ್ಲಿ ಗೆದ್ದಷ್ಟೇ ಸಂಭ್ರಮ ಮನೆಮಾಡಿತ್ತು. ಮೂರನೇ ಎಸೆತ ಡಾಟ್ ಆಗಿತ್ತು. ನಾಲ್ಕನೇ ಎಸೆತದಲ್ಲಿ ರನ್ ಕದಿಯುವ ಭರದಲ್ಲಿ ಅಲನ್ ಡೊನಾಲ್ಡ್ ರನ್ ಔಟಾದರು. ಅಲ್ಲಿಗೆ ದಕ್ಷಿಣ ಆಫ್ರಿಕಾ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಟೈ ಸಾಧಿಸಿತು. ಸೂಪರ್ ಸಿಕ್ಸರ್ ಹಂತದಲ್ಲಿ ಹೆಚ್ಚು ಅಂಕ ಪಡೆದಿದ್ದ ಆಧಾರದ ಮೇಲೆ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶಿಸಿದರೆ ಇತ್ತ ದಕ್ಷಿಣ ಆಫ್ರಿಕಾಕ್ಕೆ ಮತ್ತೆ ಸೋಲುಕಾಣುವ ಮೂಲಕ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಮುದುವರಿಸಿತು.