ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಪರೀಕ್ಷಿಸಿರುವ ಖ್ಯಾತ ಹೃದಯ ತಜ್ಞರಾದ ಡಾ. ದೇವಿಶೆಟ್ಟಿ, ಗಂಗೂಲಿಗೆ ಯಾವುದೇ ರೀತಿಯ ಎದೆನೋವು ಮತ್ತು ಉಸಿರಾಟದ ತೊಂದರೆಯಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಂಗಳವಾರ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಡಾ. ಶೆಟ್ಟಿ ಬಿಸಿಸಿಐ ಅಧ್ಯಕ್ಷರ ಆರೋಗ್ಯ ಪರೀಕ್ಷಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ವುಡ್ಲ್ಯಾಂಡ್ಸ್ ಆಸ್ಪತ್ರೆಯ 13 ವೈದ್ಯರ ತಂಡದ ಜೊತೆ ಸಭೆ ನಡೆಸಿದ ಅವರು, "ಗಂಗೂಲಿಯವರ ಹೃದಯ ಗಟ್ಟಿಯಾಗಿದ್ದು, ಅವರ 20ನೇ ವಯಸ್ಸಿನಲ್ಲಿದ್ದಷ್ಟೇ ಪ್ರಬಲವಾಗಿದೆ ಎಂದು ತಿಳಿಸಿದ್ದಾರೆ.
"ಈ ಹೃದಯಾಘಾತ ಅವರ ಹೃದಯವನ್ನು ಹಾನಿ ಮಾಡುವಂತಹದಾಗಿರಲಿಲ್ಲ. ಈ ಆಘಾತ ಭವಿಷ್ಯದಲ್ಲಿ ಖಂಡಿತವಾಗಿಯೂ ಅವರ ಜೀವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರು ಸಾಮಾನ್ಯ ಜೀವನ ನಡೆಸಲಿದ್ದಾರೆ. ಇದು ಅವರ ಜೀವಿತಾವಧಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಡಾ. ಶೆಟ್ಟಿ ಹೇಳಿದರು.
ಮಾಜಿ ಎಡಗೈ ಬ್ಯಾಟ್ಸ್‌ಮನ್ ಮತ್ತೊಂದು ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಬೇಕೇ ಎಂದು ಕೇಳಿದ್ದಕ್ಕೆ, ಹೃದ್ರೋಗ ತಜ್ಞರು ಅದನ್ನು ವೈದ್ಯಕೀಯವಾಗಿ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದಾರೆ.
"ಅವರ (ಸೌರವ್) ಬಳಿ ಎರಡು ಆಯ್ಕೆಗಳಿವೆ, ಮತ್ತೊಂದು ಆಂಜಿಯೋಪ್ಲ್ಯಾಸ್ಟಿಗೆ ಹೋಗುವುದು ಜಾಣತನ ಎಂದು ನಾನು ಭಾವಿಸುತ್ತೇನೆ. ಆದರೆ ಇದರ ನಿರ್ಧಾರವನ್ನು ನಾವು ಅವರಿಗೆ ಬಿಟ್ಟಿದ್ದೇವೆ. ಕನಿಷ್ಠ ಎರಡು ವಾರಗಳವರೆಗೆ ಕಾಯುವುದು ಒಳ್ಳೆಯದು ಎಂದು ನಾವು ಭಾವಿಸುತ್ತೇವೆ" ಎಂದು ಅವರು ತಿಳಿಸಿದ್ದಾರೆ.
ಗಂಗೂಲಿಗೆ ಶನಿವಾರ ಹೃದಯದಲ್ಲಿ ಮೂರು ಅಡೆತಡೆಗಳಿರುವುದನ್ನು ಗುರುತಿಸಿದ್ದ ವುಡ್ಲ್ಯಾಂಡ್ ಆಸ್ಪತ್ರೆ ವೈದ್ಯರು, ಅಡೆತಡೆಗಳನ್ನು ತೆರೆವುಗೊಳಿಸಲು ರೇಡಿಯಲ್ ಮಾರ್ಗದ ಮೂಲಕ ಆರ್‌ಸಿಎ ಅಥವಾ ಅಪಧಮನಿಗಳಿಗೆ ಸ್ಟಂಟಿಂಗ್ ಮಾಡಿದ್ದರು.