ಅಹ್ಮದಾಬಾದ್ : ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯವು ಇಂದಿನಿಂದ ಅಹ್ಮದಾಬಾದ್ನ ಸಬರಮತಿಯಲ್ಲಿರುವ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊಟೇರಾವು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ.
4 ಪಂದ್ಯಗಳ ಸರಣಿಯಲ್ಲಿ ತಲಾ ಒಂದು ಜಯ ಕಂಡಿರುವ ಎರಡೂ ತಂಡಗಳಿಗೂ ಈ ಅಹರ್ನಿಶಿ ಟೆಸ್ಟ್ ಪಂದ್ಯ ಪ್ರಮುಖವಾಗಿದೆ. 2014ರ ಬಳಿಕ ಈ ಕ್ರೀಡಾಂಗಣದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ. ನವೀಕರಣಗೊಂಡ ನಂತರ ಈ ಮೈದಾನದಲ್ಲಿ ಕೇವಲ ದೇಶಿ ಟಿ-20 ಲೀಗ್ನ ನಾಕೌಟ್ ಪಂದ್ಯಗಳು ಮಾತ್ರ ನಡೆದಿವೆ. ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯ ಅತ್ಯಾಕರ್ಷಣೀಯವಾಗಿದೆ. ಈ ಪಂದ್ಯವು ವೇಗಿ ಇಶಾಂತ್ ಶರ್ಮಾಗೆ 100ನೇ ಟೆಸ್ಟ್ ಪಂದ್ಯವಾಗಿದೆ. ದಿಗ್ಗಜ ಕಪಿಲ್ ದೇವ್ ನಂತರ 100ನೇ ಟೆಸ್ಟ್ ಪಂದ್ಯವನ್ನಾಡಿದ ಭಾರತದ 2ನೇ ವೇಗದ ಬೌಲರ್ ಎಂಬ ಶ್ರೇಯಕ್ಕೆ ದೆಹಲಿ ವೇಗಿ ಪಾತ್ರರಾಗಲಿದ್ದಾರೆ.
ಬಹಳ ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ನಡೆಯದಿರುವ ಈ ಕ್ರೀಡಾಂಗಣದಲ್ಲಿ ಹೆಚ್ಚಿನ ಅನುಕೂಲವನ್ನು ತವರು ತಂಡ ಪಡೆಯಲಿದೆ ಎನ್ನಲಾಗುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸಿನಲ್ಲಿರುವ ಭಾರತ ತಂಡಕ್ಕೆ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸುವ ಅವಕಾಶ ಕೂಡ ಹೆಚ್ಚಿದೆ.
ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ವೇಳೆ ಗಾಯಗೊಂಡಿದ್ದ ಉಮೇಶ್ ಯಾದವ್ ಸೋಮವಾರ ಫಿಟ್ನೆಸ್ ಟೆಸ್ಟ್ ಪಾಸ್ ಆಗಿದ್ದು, ತಂಡವನ್ನು ಸೇರಿಕೊಂಡಿದ್ದಾರೆ. ಉಮೇಶ್ ಸೇರ್ಪಡೆಯಿಂದದ ಕುಲದೀಪ್ ಯಾದವ್ 3ನೇ ಟೆಸ್ಟ್ನಲ್ಲಿ ಹೊರಗುಳಿಯುವ ಸಾಧ್ಯತೆಯಿದೆ. ಇತ್ತ ಇಂಗ್ಲೆಂಡ್ ಪರ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಜಾನಿ ಬೈರ್ಸ್ಟೋವ್ ತಂಡಕ್ಕೆ ಸೇರಿಕೊಂಡಿದ್ದಾರೆ. ಗಾಯಾಳು ಕ್ರಾಲೆ ಕೂಡ ಚೇತರಿಸಿಕೊಂಡಿದ್ದು, 3ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಆದರೆ, ಮೋಯಿನ್ ಅಲಿ ತವರಿಗೆ ಮರಳಿರುವುದರಿಂದ ಸ್ಪಿನ್ ಬೌಲಿಂಗ್ ಬಲ ಸ್ವಲ್ಪ ಕುಗ್ಗಿದೆ.
ಇದನ್ನೂ ಓದಿ: ಅವರೆಷ್ಟು ದೂರ ಸಾಗುತ್ತಾರೋ ಅಷ್ಟು ದೂರ ನಾನೂ ಸಾಗುತ್ತೇನೆ : ಜೊಕೊವಿಕ್
ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ:
ಅಹಮದಾಬಾದ್‌ನ ಸರ್ದಾರ್ ಪಟೇಲ್ ಮೊಟೇರಾ ಕ್ರೀಡಾಂಗಣವು 63 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉದ್ಘಾಟಿಸಲಿದ್ದಾರೆ. ಮೈದಾನವು 1.10 ಲಕ್ಷ ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇಲ್ಲಿಯವರೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಇದು ಏಕಕಾಲದಲ್ಲಿ 90,000 ಜನರು ಕುಳಿತುಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಆದರೆ, ಈಗ ಮೊಟೇರಾ ವಿಶ್ವದ ಅತಿದೊಡ್ಡ ಕ್ರೀಡಾಂಗಣವನ್ನು ನಿರ್ಮಿಸಿದ ಹೊಸ ದಾಖಲೆ ಬರೆಯಲಿದೆ.
800 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ಈ ಕ್ರೀಡಾಂಗಣ ನೋಡಲು ಅದ್ಭುತವಾಗಿದೆ. ಈ ಕ್ರೀಡಾಂಗಣವನ್ನು ಲಾರ್ಸೆನ್ & ಟರ್ಬೊ (ಎಲ್ & ಟಿ) ಕಂಪನಿಯು ನಿರ್ಮಿಸಿದೆ. ಈ ಕ್ರೀಡಾಂಗಣ ಒಲಿಂಪಿಕ್ ರೀತಿಯ ಈಜುಕೊಳ, ಕ್ರೀಡಾಪಟುಗಳಿಗೆ ನಾಲ್ಕು ಡ್ರೆಸ್ಸಿಂಗ್ ರೂಮ್ಗಳು, ಫುಡ್ ಕೋರ್ಟ್‌ಗಳು ಮತ್ತು ಜಿಸಿಎ ಕ್ಲಬ್ ಹೌಸ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಟೈಗರ್ ವುಡ್ಸ್ ಕಾರು ಅಪಘಾತ: ಶಸ್ತ್ರ ಚಿಕಿತ್ಸೆಗೆ ಒಳಗಾದ ಗಾಲ್ಫ್ ತಾರೆ
ತಂಡಗಳು ಹೀಗಿವೆ:
ಭಾರತ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್) ಆರ್. ಅಶ್ವಿನ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.
ಇಂಗ್ಲೆಂಡ್ : ಜೋ ರೂಟ್ (ನಾಯಕ), ಜೇಮ್ಸ್ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜ್ಯಾಕ್ ಕ್ರಾಲೆ, ಬೆನ್ ಫೋಕ್ಸ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಒಲ್ಲಿ ಪೋಪ್, ಡೊಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಒಲಿ ಸ್ಟೋನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.