ಕರಾಚಿ: ಕಳೆದ ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ತಂಡ ಟಿ-20 ಮತ್ತು ಟೆಸ್ಟ್ ಎರಡೂ ಸರಣಿಗಳಲ್ಲಿ ಮುಖಭಂಗ ಅನುಭವಿಸಿತ್ತು. ಇದರಿಂದ ಪಾಕ್ ತಂಡದ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ನಾಯಕ ಅಜರ್ ಅಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿದ್ದು ನಮ್ಮ ತಂಡದ ಘನತೆಗೆ ಧಕ್ಕೆಯುಂಟಾಗಿದೆ. ಸೋಲನ್ನು ಒಪ್ಪಿಕೊಳ್ಳಲು ತೀರಾ ಕಷ್ಟವಾಗುತ್ತಿದೆ ಎಂದು ಅಜರ್ ಅಲಿ ನೋವು ತೋಡಿಕೊಂಡಿದ್ದಾರೆ.
ಮುಖಭಂಗ..! ಎರಡನೇ ಟೆಸ್ಟ್ ಪಂದ್ಯವನ್ನೂ ಇನ್ನಿಂಗ್ಸ್ನಿಂದ ಸೋತ ಪಾಕಿಸ್ತಾನ..!
ನಾವು ಎಲ್ಲಾ ಸಿದ್ಧತೆ ಮತ್ತು ಸಕಾರಾತ್ಮಕ ಮನಸ್ಥಿತಿಯಿಂದ ಆಸ್ಟ್ರೇಲಿಯಾಕ್ಕೆ ತೆರಳಿದ್ದೆವು. ಆದರೂ ಇನ್ನಿಂಗ್ಸ್ನಿಂದ ಸೋಲುಕಂಡಿದ್ದು ಬೇಸರ ತರಿಸಿದೆ. ಹೊಸ ಬಾಲ್ನಲ್ಲಿ ವಿಕೆಟ್ ಕೀಳುವಲ್ಲಿ ನಾವು ಸಫಲರಾಗಲಿಲ್ಲ. ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾದೆವು. ವಾರ್ನರ್ರನ್ನ ಔಟ್ ಮಾಡಲು ನಾವು ಮಾಡಿದ್ದ ಪ್ಲಾನ್ಗಳೆಲ್ಲ ತಲೆಕೆಳಗಾಯಿತು. ನಾವು ಅಂದುಕೊಂಡಂತೆ ಏನು ನಡೆಯಲಿಲ್ಲ ಎಂದು ಅಜರ್ ತಂಡದ ಸೋಲಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಇನ್ನಿಂಗ್ಸ್ ಹಾಗೂ 5 ರನ್ಗಳಿಂದ ಗೆಲುವು ದಾಖಲಿಸಿದ್ರೆ, ಎರಡನೇ ಟೆಸ್ಟ್ನಲ್ಲಿ ಇನ್ನಿಂಗ್ಸ್ ಹಾಗೂ 48 ರನ್ಗಳಿಂದ ಜಯ ಸಾಧಿಸಿ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿತ್ತು.