ಮುಂಬೈ: ಯುವ ವಿಕೆಟ್ ಕೀಪರ್ ರಿಷಭ್ ಪಂತ್ರೊಂದಿಗೆ ತಮ್ಮನ್ನು ಹೋಲಿಕೆ ಮಾಡುವುದರ ಬಗ್ಗೆ ಯಾವುದೇ ಚಿಂತೆಯಿಲ್ಲ, ನಮ್ಮಿಬ್ಬರಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಲಿದೆ ಎಂದು ಭಾರತ ತಂಡದ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಮೂರು ಪಂದ್ಯಗಳಲ್ಲಿ ಟೀಂ ಮ್ಯಾನೇಜ್ಮೆಂಟ್ ಸಹಾ ಬದಲು ಪಂತ್ಗೆ ಅವಕಾಶ ನೀಡಿತ್ತು. ಪಂತ್ ಕೀಪಿಂಗ್ನಲ್ಲಿ ಕೆಲವು ಟೀಕೆಗಳನ್ನು ಎದುರಿಸಿದರೂ, ಬ್ಯಾಟಿಂಗ್ನಲ್ಲಿ ಎರಡು ಅರ್ಧಶತಕ ಸಿಡಿಸಿ ಸರಣಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಸರಣಿ ನಿರ್ಣಾಯಕವಾಗಿದ್ದ ಬ್ರಿಸ್ಬೇನ್ ಟೆಸ್ಟ್ನಲ್ಲಿ ಆಕರ್ಷಕ 89 ರನ್ ಸಿಡಿಸಿ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತಮ್ಮ ಹಾಗೂ ಪಂತ್ ಜೊತೆಗಿನ ಹೋಲಿಕೆ ಬಗ್ಗೆ ಮಾತನಾಡಿದ ಸಹಾ, "ಪಂತ್ ಮತ್ತು ನನ್ನನ್ನು ಕಳೆದ ಎರಡು ವರ್ಷಗಳಿಂದಲೂ ಹೋಲಿಕೆ ಮಾಡುವುದನ್ನು ನಾನು ಕೇಳುತ್ತಿದ್ದೇನೆ. ಆದರೆ ನಾನು ಮಾಡುವ ಕೆಲಸದಲ್ಲಿ ನಂಬಿಕೆಯಿಟ್ಟಿದ್ದೇನೆ. ಹಾಗಾಗಿ ಪಂತ್ ಬ್ಯಾಟಿಂಗ್ ಬಗ್ಗೆ ಚಿಂತಿಸುವುದಿಲ್ಲ" ಎಂದಿದ್ದಾರೆ.
"ಅವಕಾಶಕ್ಕಾಗಿ ನನ್ನ ಆಟದಲ್ಲಿ ಬದಲಾವಣೆ ಮಾಡಿಕೊಳ್ಳಲು ಬಯಸುವುದಿಲ್ಲ. ಸ್ಟಂಪ್ ಹಿಂದೆ ಯಾರು ನಿಲ್ಲಬೇಕೆಂದು ಮ್ಯಾನೇಜ್ಮೆಂಟ್ ನಿರ್ಧರಿಸುತ್ತದೆ." ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
"ಟೆಸ್ಟ್ ಕ್ರಿಕೆಟ್ನಲ್ಲಿ ಕೆಲವೊಮ್ಮೆ ಕೈಚೆಲ್ಲುವ ಕ್ಯಾಚ್ಗಳು ಪಂದ್ಯದ ಫಲಿತಾಂಶವನ್ನೇ ಬದಲಿಸುತ್ತವೆ. ಹಾಗಾಗಿ ವಿಕೆಟ್ ಕೀಪಿಂಗ್ ಒಂದು ವಿಶೇಷ ಜವಾಬ್ದಾರಿ. ಅದರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ವಿಕೆಟ್ ಕೀಪರ್ ಅಗತ್ಯವಿರುತ್ತದೆ." ಎಂದು ತಾವೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಆಡುತ್ತೇನೆ ಎಂಬ ವಿಶ್ವಾಸದಲ್ಲಿ ಸಹಾ ತಿಳಿಸಿದ್ದಾರೆ.
ಸಹಾ ಆಸ್ಟ್ರೇಲಿಯಾದ ವಿರುದ್ಧ ಅಡಿಲೇಡ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 9 ಮತ್ತು 4 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಆ ಪಂದ್ಯದಲ್ಲಿ ಭಾರತ 36 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲುಂಡಿತ್ತು.
ಇದನ್ನು ಓದಿ:ಇಂಗ್ಲೆಂಡ್ ಆಟಗಾರರಿಗೆ 6 ದಿನ ಕ್ವಾರಂಟೈನ್: ಮೊದಲ ಟೆಸ್ಟ್ಗೂ ಮುನ್ನ 3 ದಿನ ಅಭ್ಯಾಸ