ಸೌತಮ್ಟನ್: ರೋಚಕ ಹಂತ ತಲುಪಿದ್ದ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಪಂದ್ಯ ರೋಚಕ ಅಂತ್ಯ ಕಂಡಿದ್ದು, ಕೊನೆಯ ಓವರ್ನಲ್ಲಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ 11 ರನ್ಗಳ ರೋಚಕ ಜಯ ದೊರೆತಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಟಾಸ್ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 224 ರನ್ಗಳಿಸಿತ್ತು. ನಾಯಕ ಕೊಹ್ಲಿ 67, ಕೇದಾರ್ ಜಾಧವ್ 52, ರಾಹುಲ್ 30, ಧೋನಿ 28 ಹಾಗೂ ವಿಜಯ್ ಶಂಕರ್ 29 ರನ್ಗಳಿಸಿದರು.
ಅಫ್ಘಾನ್ ಪರ ರಶೀದ್ 1, ನಬಿ 2, ನೈಬ್ 2, ರಹ್ಮತ್ ಶಾ 1 ಹಾಗೂ ಅಫ್ಟಾಬ್ ಆಲಂ 1 ವಿಕೆಟ್ ಪಡೆದು ಮಿಂಚಿದ್ದರು.
225 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ ಅಫ್ಘಾನಿಸ್ತಾನ 50 ಓವರ್ಗಳಲ್ಲಿ 213 ರನ್ಗಳಿಸಲಷ್ಟೇ ಶಕ್ತವಾಗಿ 11 ರನ್ಗಳಿಂದ ಸೋಲೊಪ್ಪಿಕೊಂಡಿತು.
ಆರಂಭಿಕರಾಗಿ ಕಣಕ್ಕಿಳಿದ ಹಜ್ರತ್ತುಲ್ಹಾ ಝಾಜೈ 10 ರನ್ಗಳಿಸಿದ್ದ ವೇಳೆ ಶಮಿ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರ ಬಂದ ರೆಹ್ಮತ್ ಶಾ ನಾಯಕ ನೈಬ್ ಜೊತೆಗೂಡಿ 44 ರನ್ಗಳ ಜೊತಯಾಟ ನೀಡಿದರು. 42 ಎಸೆತಗಳಲ್ಲಿ 27 ರನ್ಗಳಿಸಿದ್ದ ನೈಬ್ ಹಾರ್ದಿಕ್ ಪಾಂಡ್ಯ ಓವರ್ನಲ್ಲಿ ವಿಜಯ್ ಶಂಕರ್ಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಹಸ್ಮತ್ತುಲ್ಹಾ ಶಾಹಿದಿ(21) ರಹ್ಮತ್(36) ಜೊತೆಗೂಡಿ 40 ರನ್ಗಳ ಜೊತೆಯಾಟ ನೀಡಿದರು. ಇವರಿಬ್ಬರನ್ನು ಒಂದೇ ಓವರ್ನಲ್ಲಿ ಬುಮ್ರಾ ಔಟ್ ಮಾಡಿದರು. ನಂತರ ಬಂದ ಮಾಜಿ ನಾಯಕ ಅಸ್ಗರ್ ಅಫ್ಘನ್(8) ಚಹಾಲ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
130 ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಗೂಡಿದ ನಬಿ ಹಾಗೂ ನಜೀಬುಲ್ಹಾ ಜಾಡ್ರನ್(21) 6ನೇ ವಿಕೆಟ್ಗೆ 30 ರನ್ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. 23 ಎಸೆತಗಳಲ್ಲಿ 21 ರನ್ಗಳಿಸಿದ್ದ ನಜೀಬುಲ್ಹಾರನ್ನು ಪಾಂಡ್ಯ ಪೆವಿಲಿಯನ್ಗಟ್ಟಿ ಭಾರತದ ಪಾಳೆಯದಲ್ಲಿ ನಗು ತರಿಸಿದರು.
ಒಂದುಕಡೆ ವಿಕೆಟ್ ಬೀಳುತ್ತಿದ್ದರು ಕೆಚ್ಚೆದೆಯಿಂದ ಬ್ಯಾಟಿಂಗ್ ನಡೆಸಿದ ಮೊಹಮ್ಮದ್ ನಬಿ 55 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 52 ರನ್ಗಳಿಸಿ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಮೊಹಮ್ಮದ್ ಶಮಿ ಹ್ಯಾಟ್ರಿಕ್:
ಕೊನೆಯ ಓವರ್ನಲ್ಲಿ ಅಫ್ಘಾನ್ ಗೆಲುವಿಗೆ 16 ರನ್ಗಳ ಅವಶ್ಯಕತೆಯಿತ್ತು. ಶಮಿ ಎಸೆದ 50 ಓವರ್ನ ಮೊದಲ ಎಸೆತದಲ್ಲಿ ನಬಿ ಬೌಂಡರಿ ಬಾರಿಸಿದರು. ನಂತರದ ಎಸೆತದಲ್ಲಿ ಯಾವುದೆ ರನ್ ಬರಲಿಲ್ಲ. 3 ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ನಬಿ ಪಾಂಡ್ಯಗೆ ಕ್ಯಾಚ್ ನೀಡಿ ಔಟಾದರು. 4 ನೇ ಎಸೆತದಲ್ಲಿ ಅಫ್ಟಾಬ್ ಆಲಂ ಕ್ಲೀನ್ ಬೌಲ್ಡ್ ಆದರು. 5ನೇ ಎಸೆತದಲ್ಲಿ ಮುಜೀಬ್ರನ್ನು ಬೌಲ್ಡ್ ಮಾಡುವ ಮೂಲಕ 2019 ವಿಶ್ವಕಪ್ನಲ್ಲಿ ಶಮಿ ಮೊದಲ ಹ್ಯಾಟ್ರಿಕ್ ಪಡೆದ ಬೌಲರ್ ಎನಿಸಿಕೊಂಡರು.