ನವದೆಹಲಿ: ಭಾರತ ತಂಡದ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಸ್ವಯಂ ಪ್ರೇರಿತರಾಗಿ ಜಮ್ಮು ಮತ್ತು ಕಾಶ್ಮೀರದ ದುರ್ಬಲ ಮತ್ತು ಅವಕಾಶ ವಂಚಿತ ಮಕ್ಕಳಿಗೆ ಕ್ರಿಕೆಟ್ನಲ್ಲಿ ಅವಕಾಶ ಒದಗಿಸಲು ಬಯಸಿರುವುದಾಗಿ ತಿಳಿಸಿದ್ದಾರೆ.
ಆಗಸ್ಟ್ 15 ರಂದು ಭಾರತ ತಂಡದ ನಾಯಕ ಎಂಎಸ್ ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಸುರೇಶ್ ರೈನಾ ತಮ್ಮಲ್ಲಿರುವ ಕ್ರಿಕೆಟ್ ಜ್ಞಾನವನ್ನು ಅವಕಾಶವಂಚಿತ ಹಾಗೂ ದುರ್ಬಲ ಮಕ್ಕಳಿಗಾಗಿ ಉಪಯೋಗಿಹಿಸುವುದಾಗಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ, ರೈನಾ ಅಲ್ಲಿನ ಮಕ್ಕಳಿಗೆ ನೆರವಾಗುವ ಮೂಲಕ ಮತ್ತೆ ಕ್ರಿಕೆಟ್ಗೆ ಮರಳಲು ಬಯಸಿದ್ದಾರೆ. "ನಾನು15 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಗುರುತಿಸಿಕೊಂಡಿದ್ದೇನೆ. ಹಾಗಾಗಿ ನಾನು ಈ ಅವಧಿಯಲ್ಲಿ ಕಲಿತ ಜ್ಞಾನ ಮತ್ತು ಕೌಶಲ್ಯಗಳನ್ನು ಮುಂದಿನ ಪೀಳಿಗೆಗೆ ರವಾನಿಸಲು ಬಯಸುತ್ತೇನೆ" ಎಂದು ಬರೆದಿದ್ದಾರೆ.
33 ವರ್ಷದ ಕ್ರಿಕೆಟಿಗ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಆಟವನ್ನು ಉತ್ತೇಜಿಸಲು ಬಯಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಭೇಟೆಯಾಡುವುದು ಮತ್ತು ಅವರಿಗೆ ತರಬೇತಿಗಳನ್ನು ನೀಡುವ ಗುರಿ ಹೊಂದಿದ್ದಾರೆ.
"ಜಮ್ಮು ಮತ್ತು ಕಾಶ್ಮೀರದಲ್ಲಿನ ಶಾಲೆಗಳು ಮತ್ತು ಗ್ರಾಮೀಣ ಪ್ರದೇಶಗಳು ಸೇರಿದಂತೆ ವಿವಿಧ ಭಾಗಗಳ ಪ್ರತಿಭಾವಂತ ಯುವಕರು ಅಥವಾ ಮಕ್ಕಳನ್ನು ಗುರುತಿಸುವುದು ನನ್ನ ಉದ್ದೇಶ. ಕ್ರಿಕೆಟ್ ಕೇವಲ ಒಂದು ಕ್ರೀಡೆಯಲ್ಲ, ಅದು ಒಂದು ವೃತ್ತಿಪರ ನೀತಿ, ಶಿಸ್ತನ್ನು ರೂಪಿಸುವ ಒಂದು ಪ್ರಕ್ರಿಯೆ. ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಡರಾಗುವುದಲ್ಲದೆ, ಆರೋಗ್ಯವನ್ನು ಕಾಪಾಡಿಕೊಳ್ಳಲಿದ್ದಾರೆ. ಮಕ್ಕಳು ಯಾವುದಾದರೂ ಕ್ರೀಡಾ ಚಟುವಟಿಕೆಯಲ್ಲಿ ತರಬೇತಿಯನ್ನು ಪಡೆದಾಗ ಸ್ವಯಂಚಾಲಿತವಾಗಿ ಶಿಸ್ತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಿದ್ದಾರೆ. ದೈಹಿಕ ಸಾಮರ್ಥ್ಯದ ಮಹತ್ವವನ್ನು ತಿಳಿಯುತ್ತಾರೆ. ಅಲ್ಲದೆ ಅವರು ನಮ್ಮ ರಾಷ್ಟ್ರದ ಭವಿಷ್ಯವಾಗಲಿದ್ದಾರೆ" ಎಂದು ಪತ್ರದಲ್ಲಿ ಬರೆದಿದ್ದಾರೆ.