ಸೌತಾಂಪ್ಟನ್: ಕಳೆದ ಕೆಲವು ತಿಂಗಳುಗಳಿಂದ ಇಂಗ್ಲೆಂಡ್ ಟಿ20 ತಂಡದಲ್ಲಿ ಮಿಂಚುತ್ತಿರುವ ಡೇವಿಡ್ ಮಲನ್, ತಮ್ಮನ್ನು ವಿರಾಟ್ ಕೊಹ್ಲಿಯ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ, ತಾವೂ ಅವರ ಹತ್ತಿರದಲ್ಲಿದ್ದೇನೆ ಎಂದು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.
33 ವರ್ಷದ ಡೇವಿಡ್ ಮಲನ್ ಇಂಗ್ಲೆಂಡ್ ಪರ 15 ಟಿ20 ಪಂದ್ಯಗಳನ್ನಾಡಿದ್ದು 50.85ರ ಸರಾಸರಿಯಲ್ಲಿ 661 ರನ್ಗಳಿಸಿದ್ದಾರೆ. 5 ಅರ್ಧಶತಕ 7 ಅರ್ಧಶತಕ ಮತ್ತು ಒಂದು ಶತಕವನ್ನು ಸಿಡಿಸಿದ್ದು ಟಿ20 ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡು ಟಿ20 ಪಂದ್ಯಗಳಲ್ಲಿ ಕ್ರಮವಾಗಿ 66 ಹಾಗೂ 42 ರನ್ಗಳಿಸಿ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಟಿ20 ಕ್ರಿಕೆಟ್ನಲ್ಲಿ ಉತ್ತಮ ಸ್ಥಿರತೆ ಕಾಪಾಡಿಕೊಂಡು ಮುನ್ನುಗ್ಗುತ್ತಿರುವ ಅವರನ್ನು ಕೊಹ್ಲಿ ಜೊತೆ ಹೋಲಿಕೆ ಮಾಡಿದ್ದಕ್ಕೆ ತಮ್ಮನ್ನು ಇಂಡಿಯನ್ ಸ್ಟಾರ್ಗೆ ಹೋಲಿಕೆ ಮಾಡುವಷ್ಟು ಸಾಧನೆ ತಾವು ಮಾಡಿಲ್ಲ ಎಂದಿದ್ದಾರೆ.
ಅಂಕಿ ಅಂಶಗಳು ಸೂಚಿಸುತ್ತಿದ್ದರೂ ಸಹ ನಾನು ವಿರಾಟ್ ಕೊಹ್ಲಿ ಮತ್ತು ಕೆಲವು ಹುಡುಗರ ಹತ್ತಿರದಲ್ಲಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ವಿರಾಟ್ 50 ಕ್ಕೂ ಹೆಚ್ಚು ಪಂದ್ಯಗಳನ್ನಾಡಿ, 50 ಕ್ಕೂ ಹೆಚ್ಚು ಸರಾಸರಿ ಹೊಂದಿದ್ದಾರೆ. ಆತ ಅಸಾಧಾರಣ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ.
ನಾನೇನಾದರೂ 50 ಪಂದ್ಯಗಳನ್ನಾಡಿದರೆ ಅವರ ಜೊತೆ ಸ್ವಲ್ಪಮಟ್ಟಿಗೆ ಹೋಲಿಸಬಹುದು ಎಂದಿರುವ ಅವರು ನಾನು ಇದೇ ರೀತಿ ರನ್ಗಳಿಸುತ್ತಿದ್ದರೆ, ನನ್ನನ್ನು ಅವರು (ಇಂಗ್ಲೆಂಡ್ ತಂಡ) ನಿರ್ಲಕ್ಷ್ಯ ಮಾಡುವುದು ಕಷ್ಟವಾಗುತ್ತದೆ. ನಾನು ಉತ್ತಮ ಪ್ರದರ್ಶನ ತೋರುತ್ತಾ ಆರಂಭಿಕ ಇಲೆವೆನ್ನಲ್ಲಿರಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.