ಕೊಲಂಬೊ: ಶ್ರೀಲಂಕಾದ ವೇಗದ ಬೌಲರ್ ನುವಾನ್ ಕುಲಶೇಖರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದಾರೆ. 2011ರಲ್ಲಿ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ-ಭಾರತ ಪಂದ್ಯದಲ್ಲಿ ಧೋನಿ ಸಿಕ್ಸ್ ಬಾರಿಸಿದ್ದು, ಇವರ ಓವರ್ನಲ್ಲಿ ಎಂಬುದು ವಿಶೇಷವಾಗಿದೆ.
ಶ್ರೀಲಂಕಾ ಪರ ಅತ್ಯಧಿಕ ವಿಕೆಟ್ ಪಡೆದ 3ನೇ ಬೌಲರ್ ಎಂಬ ಖ್ಯಾತಿ ಪಡೆದುಕೊಂಡಿರುವ ಕುಲಶೇಖರ 184 ಏಕದಿನ ಪಂದ್ಯಗಳಿಂದ 199 ವಿಕೆಟ್ ಪಡೆದುಕೊಂಡಿದ್ದಾರೆ. 58 ಟಿ-20 ಪಂದ್ಯಗಳಿಂದ 66 ವಿಕೆಟ್ ಹಾಗೂ 21 ಟೆಸ್ಟ್ ಪಂದ್ಯಗಳಿಂದ 48 ವಿಕೆಟ್ ಪಡೆದುಕೊಂಡಿದ್ದಾರೆ.
ಶ್ರೀಲಂಕಾ ಪರ ಚಮಿಂದ ವಾಸ್ ಹಾಗೂ ಲಸಿತ್ ಮಾಲಿಂಗ್ ಬಳಿಕ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ಶ್ರೇಯ ಇವರಿಗೆ ಸಲ್ಲುತ್ತದೆ. 2003ರ ನವೆಂಬರ್‌ನಲ್ಲಿ ಕುಲಶೇಖರ ಇಂಗ್ಲೆಂಡ್ ವಿರುದ್ಧದ ಅಂತಾರಾಷ್ಟ್ರೀಯ ಏಕದಿನಕ್ಕೆ ಪದಾರ್ಪಣೆ ಮಾಡಿದ್ದರು.
ಹಂಬಂಟೋಟದಲ್ಲಿ ಜುಲೈ 2017ರಲ್ಲಿ ಜಿಂಬಾಬ್ವೆ ವಿರುದ್ಧ ಕಡೆಯ ಏಕದಿನ ಪಂದ್ಯವನ್ನಾಡಿದ್ದರು. ಅದಾಗಿ ಮಾರ್ಚ್ 2018ರ ಬಳಿಕ ನುವಾನ್ ಯಾವುದೇ ಪಂದ್ಯಗಳನ್ನಾಡಿಲ್ಲ. 2014ರ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ತಂಡ ಭಾರತದ ವಿರುದ್ಧ 6 ವಿಕೆಟ್ಗಳ ಗೆಲುವು ದಾಖಲು ಮಾಡಿತ್ತು. ಈ ವೇಳೆ ನುವಾನ್ ಕುಲಶೇಖರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇನ್ನು 2009ರ ಮಾರ್ಚ್ ತಿಂಗಳಲ್ಲಿ ಕುಲಸೇಖರ ಬೌಲಿಂಗ್ನ ಐಸಿಸಿ ಶ್ರೇಯಾಂಕದಲ್ಲಿ ನಂಬರ್ 1ಸ್ಥಾನಕ್ಕೇರಿದ್ದರು.
ಮುಂದಿನ ಶುಕ್ರವಾರ ಬಾಂಗ್ಲಾ ವಿರುದ್ಧದ ಮೊದಲ ಏಕದಿನ ಪಂದ್ಯದ ಬಳಿಕ ಶ್ರೀಲಂಕಾ ವೇಗ ಲಸಿತ್ ಮಾಲಿಂಗ್ ಕೂಡ ನಿವೃತ್ತಿಯಾಗುವುದಾಗಿ ಘೋಷಣೆ ಮಾಡಿದ್ದಾರೆ.