ಜೋಹನ್ಸ್‌ಬರ್ಗ್ : ಅಂತೂ ಐಸಿಸಿ ವಿಶ್ವಕಪ್ ಮುಂದೂಡಿಕೆ ನಿರ್ಧಾರನ್ನು ತೆಗೆದುಕೊಂಡಾಗಿದೆ. ಐಪಿಎಲ್ ನಡೆಯುವುದು ಖಚಿತವಾಗಿದೆ. ಆದರೆ, ದಕ್ಷಿಣ ಆಫ್ರಿಕಾ ಆಟಗಾರರಿಗೆ ಮಾತ್ರ ಪಾಲ್ಗೊಳ್ಳುವುದು ಇನ್ನೂ ಅನುಮಾನವಾಗಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳಲು ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್ ಎನ್ಒಸಿ ನೀಡಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಕೂಡ ಸಮ್ಮತಿ ಸೂಚಿಸುವುದು ಖಚಿತವಾಗಿದೆ. ಆದರೆ, ದಕ್ಷಿಣ ಆಫ್ರಿಕಾ ಮಂಡಳಿ ಆಟಗಾರರಿಗೆ ಅನುಮತಿ ನೀಡಿದರೂ ಸಹಾ ಅಲ್ಲಿ ಇನ್ನೂ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅನುಮತಿ ನೀಡದಿರುವುದು ಕೂಡ ಪ್ರಾಂಚೈಸಿಗಳಿಗೆ ತಲೆ ನೋವಾಗಿದೆ.
ಆರ್ಸಿಬಿ ತಂಡಕ್ಕೆ ದಕ್ಷಿಣ ಆಫ್ರಿಕಾದ ಮೂರು ಆಟಗಾರರು ಇದ್ದು, ಅವರ ಮೇಲೆ ಇಡೀ ತಂಡ ಅವಲಂಭಿತವಾಗಿದೆ. ಬ್ಯಾಟಿಂಗ್ನಲ್ಲಿ ಎಬಿಡಿ ಹಾಗೂ ಬೌಲಿಂಗ್ನಲ್ಲಿ ಡೇಲ್ ಸ್ಟೈನ್ ಹಾಗೂ ಕ್ರಿಸ್ ಮೋರಿಸ್ ಆರ್ಸಿಬಿ ತಂಡದಲ್ಲಿದ್ದಾರೆ. ಒಂದು ವೇಳೆ ಈ ಮೂವರು ಆಟಗಾರರು ಬರದಿದ್ರೆ, ಆರ್ಸಿಬಿ ತಂಡಕ್ಕೆ ತುಂಬಲಾಗದ ನಷ್ಟವಾಗಲಿದೆ.
ಈ ಮೂವರು ಆಟಗಾರರಲ್ಲದೆ ಸಿಎಸ್ಕೆ ತಂಡದಲ್ಲೂ ಮೂವರು ಆಟಗಾರರಿದ್ದಾರೆ. ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹೀರ್ ಹಾಗೂ ಲುಂಗಿ ಎಂಗಿಡಿ ಸಿಎಸ್ಕೆ ತಂಡದ ಭಾಗವಾಗಿದ್ರೆ. ಕ್ವಿಂಟನ್ ಡಿಕಾಕ್ ಮುಂಬೈ ತಂಡದ ಪರ, ಡೇವಿಡ್ ಮಿಲ್ಲರ್ ರಾಜಸ್ಥಾನ್ ರಾಯಲ್ಸ್ ಪರ, ಹರ್ಡೂಸ್ ವಿಜೋನ್ ಕಿಂಗ್ಸ್ ಇಲೆವೆನ್ ಪರ ಹಾಗೂ ಕಗಿಸೋ ರಬಡಾ ಡೆಲ್ಲಿ ಕ್ಯಾಪಿಟಲ್ ಪರ ಆಡಲಿದ್ದರು.
ಸದ್ಯದ ಮಾಹಿತಿ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನದ ಪುನಾರಂಭದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕಾರಣದಿಂದ ಈ 10 ಆಟಗಾರರ ಲಭ್ಯತೆ 13ನೇ ಆವೃತ್ತಿಯ ಐಪಿಎಲ್ಗೆ ಸಿಗಲಿದೆಯೇ ಎಂಬುದು ನಿಗೂಢವಾಗಿದೆ. ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ನವೆಂಬರ್ 8ರಂದು ಫೈನಲ್ ಪಂದ್ಯ ನಡೆಯಲಿದೆ.