ಅಹ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪ್ರವಾಸಿ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮೈದಾನದಲ್ಲಿ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಇದೀಗ ಈ ಘಟನೆಗೆ ಕಾರಣ ಏನೆಂಬುದನ್ನು ವೇಗಿ ಮೊಹಮ್ಮದ್ ಸಿರಾಜ್ ಬಹಿರಂಗಪಡಿಸಿದ್ದಾರೆ.
ನಾಲ್ಕನೇ ಟೆಸ್ಟ್ನಲ್ಲಿ ಸಿರಾಜ್ ಇಂಗ್ಲೆಂಡ್ ತಂಡ ಪ್ರಮುಖ ಆಟಗಾರರಾದ ಜೋ ರೂಟ್ ಮತ್ತು ಜಾನಿ ಬೈರ್ಸ್ಟೋವ್ ವಿಕೆಟ್ ಪಡೆದಿದ್ದರು. ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿದ ನಂತರ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಹ್ಲಿ- ಸ್ಟೋಕ್ಸ್ ಮಾತಿನ ಚಕಮಕಿಯ ಬಗ್ಗೆ ತಿಳಿಸಿದ್ದಾರೆ.
"ಬೆನ್ ಸ್ಟೋಕ್ಸ್ ನನ್ನನ್ನು ನಿಂದಿಸಿದರು. ಹಾಗಾಗಿ, ವಿರಾಟ್ ಭಾಯ್ ಮಧ್ಯಪ್ರವೇಶಿಸಿದರು. ನಂತರ ಪರಿಸ್ಥಿತಿ ನಿಭಾಯಿಸಿದರು" ಎಂದು ಸಿರಾಜ್ ಹೇಳಿದ್ದಾರೆ.
ಸ್ಟೋಕ್ಸ್ ಮತ್ತು ಕೊಹ್ಲಿ ಮಾತುಕತೆ ದೊಡ್ಡದಾಗುತ್ತಿದ್ದಂತೆ ಮೈದಾನದ ಅಂಪೈರ್ಗಳಾದ ನಿತಿನ್ ಮೆನನ್ ಮತ್ತು ವೀರೇಂದ್ರ ಶರ್ಮಾ ಮಧ್ಯ ಪ್ರವೇಶಿಸಿ ಇಬ್ಬರನ್ನು ಶಾಂತಗೊಳಿಸಿದರು.
ಇನ್ನು ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿ, ಇದು ಬ್ಯಾಟಿಂಗ್‌ಸ್ನೇಹಿ ವಿಕೆಟ್ ಆಗಿದ್ದರಿಂದ ಮೊದಲೇ ಹೇಗೆ ಬೌಲಿಂಗ್ ಮಾಡಬೇಕೆಂದು ಕೊಹ್ಲಿಯೊಂದಿಗೆ ಚರ್ಚಿಸಲಾಗಿತ್ತು. ಸಾಕಷ್ಟು ತಾಳ್ಮೆಯಿಂದ ಬೌಲಿಂಗ್ ಮಾಡಲು ಮತ್ತು ಅದೇ ಸ್ಥಳದಲ್ಲಿ ಚೆಂಡನ್ನು ಪ್ರಯೋಗಿಸಲು ಯೋಜನೆ ರೂಪಿಸಿದ್ದೆವು. ನಾವು ಕೇವಲ 2 ವೇಗಿಗಳನ್ನು ಹೊಂದಿದ್ದೇವೆ. ರೋಟೇಶನ್ ಕೂಡ ಮುಖ್ಯವಾಗಿದೆ ಎಂದು ವಿರಾಟ್ ಭಾಯ್ ನನಗೆ ಹೇಳಿದ್ದರು. ನಾನು ರಿಲಯನ್ಸ್ ಎಂಡ್ನಿಂದ ಬೌಲಿಂಗ್ ಮಾಡಿದಾಗ ಸ್ವಲ್ಪ ಬೌನ್ಸ್ ಹಾಗೂ ಉತ್ತಮ ಮೂವ್ಮೆಂಟ್ ಹೊಂದಿದ್ದರಿಂದ ವಿಕೆಟ್ ಪಡೆಯಲು ಸಾಧ್ಯವಾಯಿತು ಎಂದು ಸಿರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ 205ಕ್ಕೆ ಆಲೌಟ್: ಮೊದಲ ದಿನ ಗಿಲ್ ವಿಕೆಟ್ ಕಳೆದುಕೊಂಡು 24 ರನ್ಗಳಿಸಿದ ಭಾರತ