ರಾಜ್ಕೋಟ್: 86ನೇ ಆವೃತ್ತಿಯ ರಣಜಿ ಟೂರ್ನಿಯಲ್ಲಿ ಸೌರಾಷ್ಟ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆತಿಥೇಯ ಸೌರಾಷ್ಟ್ರ ಹಾಗೂ ಬಂಗಾಳ ತಂಡಗಳ ನಡುವೆ ನಡೆದ ನಿರ್ಣಾಯಕ ಪೈಪೋಟಿಯ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಆದರೆ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿರುವ ಸೌರಾಷ್ಟ್ರ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡು ನೂತನ ದಾಖಲೆ ಬರೆಯಿತು.
ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆತಿಥೇಯರು ಮೊದಲ ಇನ್ನಿಂಗ್ಸ್ನಲ್ಲಿ 425 ರನ್ಗಳಿಗೆ ಆಲೌಟ್ ಆದ್ರು. ಇದಕ್ಕೆ ಪ್ರತ್ಯುತ್ತರವಾಗಿ ಬಂಗಾಳ ತಂಡ 381 ರನ್ ಗಳಿಸಿ ಹಿನ್ನೆಡೆ ಅನುಭವಿಸಿತ್ತು. 44 ರನ್ಗಳ ಮುನ್ನಡೆ ಪಡೆದುಕೊಂಡು ಎರಡನೇ ಇನ್ನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ಟೀಂ ಎರಡನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 105 ರನ್ ಗಳಿಸುವಷ್ಟರಲ್ಲಿ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ಹೀಗಾಗಿ ಸೌರಾಷ್ಟ್ರ ರಣಜಿ ಪ್ರಶಸ್ತಿಯ ಗೌರವ ಪಡೆಯಿತು.
ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿದ ಜಯದೇವ್ ಉನಾದ್ಕಟ್ ಪಡೆ ಚೊಚ್ಚಲ ರಣಜಿ ಟ್ರೋಫಿಗಿಟ್ಟಿಸಿದ ಸಾಧನೆ ಮಾಡಿದ್ದು ತಂಡದ ಸಂಭ್ರಮ ಇಮ್ಮಡಿಯಾಗಿದೆ.
ಸೌರಾಷ್ಟ್ರ ಪರ ಮೊದಲ ಇನ್ನಿಂಗ್ಸ್ನಲ್ಲಿ ಅರ್ಪಿತ್ 106 ರನ್, ಅವಿ ಬರೋಟ್ 54 ರನ್ ಹಾಗೂ ವಿಶ್ವರಾಜ್ ಜಡೇಜಾ 54 ರನ್ ಜತೆಗೆ ಚೇತೇಶ್ವರ್ ಪೂಜಾರಾ 66 ರನ್ ಗಳಿಸಿ ತಂಡದ ಮೊತ್ತ ಏರಿಕೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ಇನ್ನು ಬಂಗಾಳ ಪರ ಸಂದೀಪ್ ಚಟರ್ಜಿ 81, ವೃದ್ಧಿಮಾನ್ ಸಾಹಾ 64, ಅನುಸ್ತುಪ್ 63 ಹಾಗೂ ನಂದಿ ಅಜೇಯ 40 ರನ್ ಗಳಿಸಿದ್ರೂ ತಂಡ ಹಿನ್ನೆಡೆ ಅನುಭವಿಸುವಂತಾಯಿತು.
ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಗೆಲುವು ಸಾಧಿಸಿದ ಬಂಗಾಳ ತಂಡ ಫೈನಲ್ ಪ್ರವೇಶ ಪಡೆದುಕೊಂಡಿತ್ತು.