ಮುಂಬೈ : ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ನಾಯಕ ಜೇಸನ್ ಹೋಲ್ಡರ್ ಅವರಿಗೆ ಸಾಕಷ್ಟು ಪ್ರತಿಭೆಯಿದೆ. ಆದರೆ, ಅದನ್ನು ಅವರಿಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಅವರೊಬ್ಬ ಕಡೆಗಣಸಲ್ಪಡುತ್ತಿರುವ ಆಲ್ರೌಂಡರ್ ಎಂದು ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಇಂದಿನಿಂದನ ಸೌತಾಂಪ್ಟನ್ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುತ್ತಿದೆ. ಈ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಜೇಸನ್ ಹೋಲ್ಡರ್ ಮುನ್ನಡೆಸುತ್ತಿದ್ದಾರೆ.
ಆಲ್ರೌಂಡರ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಜೇಸನ್ ಹೋಲ್ಡರ್ ನಂತರದ ಸ್ಥಾನದಲ್ಲಿರುವ ಬೆನ್ಸ್ಟೋಕ್ಸ್ ನೇತೃತ್ವದ ತಂಡವನ್ನು ಎದುರಿಸುತ್ತಿದ್ದು, 1988ರ ನಂತರ ವಿಂಡೀಸ್ಗೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದುಕೊಡಲು ಒಳ್ಳೆಯ ಅವಕಾಶ ದೊರೆತಿದೆ. ಈ ಹಿಂದೆ ಸರ್ ವಿವಿಯನ್ ರಿಚರ್ಡ್ಸ್ ಕೊನೆಯ ಬಾರಿ ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದುಕೊಟ್ಟಿದ್ದರು.
"ಜೇಸನ್ ಹೋಲ್ಡರ್ ಪ್ರಸ್ತುತ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕಡೆಗಣಿಸಲ್ಪಡುತ್ತಿರುವ ಆಲ್ರೌಂಡರ್. ಯಾಕೆಂದರೆ, ಮೈದಾನದಲ್ಲಿ ನೀವು ಕೆಮರ್ ರೋಚ್, ಶನನ್ ಗೇಬ್ರಿಯಲ್ ಅವರನ್ನು ನೋಡಿ. ಆದರೆ, ಜೇಸನ್ ಮಾತ್ರ ಸ್ಕೋರ್ಬೋರ್ಡ್ನಲ್ಲಿ ಕಾಣಿಸುತ್ತಾರೆ. ಜೊತೆಗೆ ಅವರು ಬೌಲಿಂಗ್ನಲ್ಲೂ ಮೂರು ವಿಕೆಟ್ ಪಡೆದಾಗ ಅದು ನಿಮಗೆ ತಿಳಿಯುತ್ತದೆ" ಎಂದು ತಮ್ಮ ಮಾಸ್ಟರ್ ಬ್ಲಾಸ್ಟರ್ 100ಎಂಬಿ ಆ್ಯಪ್ನಲ್ಲಿ ಬ್ರಿಯಾನ್ ಲಾರಾ ಜೊತೆಗೆ ಸಂವಾದದಲ್ಲಿ ಹೇಳಿದ್ದಾರೆ.
"ಅವರು ಬ್ಯಾಟಿಂಗ್ ಬಂದಾಗ ನಿರ್ಣಾಯಕವಾದ 50-55 ರನ್ ಬಾರಿಸಿದ್ದಾರೆ. ಆದರೆ, ಅವರಿಗೆ ದಕ್ಕಬೇಕಾದ ಮೌಲ್ಯ ಸಿಗುತ್ತಿಲ್ಲ. ಆದರೆ, ಅವರು ತಂಡಕ್ಕೆ ನಿರಂತರವಾಗಿ ನೀಡುತ್ತಿರುವ ಕೊಡುಗೆ ಅದ್ಭುತವಾಗಿದೆ. ಅವರೊಬ್ಬ ಭಯಂಕರ ಆಟಗಾರ" ಎಂದು ಸಚಿನ್ ಹೊಗಳಿದ್ದಾರೆ.
ಹೋಲ್ಡರ್ ವಿಂಡೀಸ್ ಪರ 40 ಟೆಸ್ಟ್ಗಳಲ್ಲಿ 3 ಶತಕಗಳ ಸಹಿತ 1898 ರನ್ ಹಾಗೂ 106 ವಿಕೆಟ್ ಹಾಗೂ 113 ಏಕದಿನ ಪಂದ್ಯಗಳಲ್ಲಿ 9 ಅರ್ಧಶತಕಗಳ ಸಹಿತ 1821 ರನ್ ಹಾಗೂ 136 ವಿಕೆಟ್ ಪಡೆದಿದ್ದಾರೆ.