ತಿರುವನಂತಪುರಂ: ಭಾರತ ತಂಡ ಗೆದ್ದಿರುವ 2 ವಿಶ್ವಕಪ್ ತಂಡದಲ್ಲಿದ್ದ ಶ್ರೀಶಾಂತ್ 2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ಸೋಲಿಸಲು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಭಾರತ ಕ್ರಿಕೆಟ್ ಕಂಡ ಅಗ್ರೆಸ್ಸಿವ್ ಆಟಗಾರನಾಗಿದ್ದ ಶ್ರೀಶಾಂತ್ ಕಳೆದ ಕೇರಳ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ 2024ರ ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರಂನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ಸೋಲಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.
ಶಶಿ ತರೂರ್ ಈಗಾಗಲೆ ಮೂರು ಬಾರಿ ತಿರುವನಂತಪುರಂ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ. ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ 11 ಸಾವಿರ ಮತಗಳಿಂದ ಕಾಂಗ್ರೇಸ್ ಅಭ್ಯರ್ಥಿಯ ವಿರುದ್ಧ ಸೋಲನುಭವಿಸಿದ್ದ ಶ್ರೀಶಾಂತ್, ತರೂರ್ ಅಂತಹ ದೊಡ್ಡ ರಾಜಕಾರಣಿಯ ವಿರುದ್ಧ ಚುನಾವಣೆಗೆ ನಿಲ್ಲಲು ತಯಾರಾಗುತ್ತಿರುವುದು ಆಶ್ಚರ್ಯಕರ ವಿಷಯವಾಗಿದೆ.
ನಾನೊಬ್ಬ ಸಾಮನ್ಯ ವ್ಯಕ್ತಿಯಾಗಿ ಶಶಿ ತರೂರ್ ಅವರ ಬಹುದೊಡ್ಡ ಅಭಿಮಾನಿ. ಆದರೆ ಅವರನ್ನು ಖಂಡಿತ ತಿರುವನಂತಪುರಂ ಕ್ಷೇತ್ರದಿಂದ ಅವರನ್ನು ಚುನಾವಣೆಯಲ್ಲಿ ಸೋಲಿಸಬಲ್ಲೆ. ನಾನೀಗ ಸ್ವತಂತ್ರ ಹಾಗೂ ನಿಯಂತ್ರಣದಲ್ಲಿದ್ದೇನೆ. ನಾನು ಸಿನಿಮಾ, ಸಂಗೀತ, ಸಾಹಿತ್ಯ , ವೆಬ್ ಸೀರೀಸ್, ಕ್ರಿಕೆಟ್ ಹಾಗೂ ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದೇನೆ ಎಂದು ಕಳೆದ ಹಿಂದಿ ಬಿಗ್ಬಾಸ್ ರನ್ನರ್ ಆಪ್ ಕೂಡ ಆಗಿರುವ ಶ್ರೀಶಾಂತ್ ಹೇಳಿಕೊಂಡಿದ್ದಾರೆ.
ಶ್ರೀಶಾಂತ್ 2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರಾಗಿದ್ದರು. ಇವರು ಭಾರತ ತಂಡದ ಪರ 2005ರಿಂದ 2011ರವರೆಗೆ ಪ್ರತಿನಿಧಿಸಿ ಎಲ್ಲಾ ವಿಭಾಗದ ಕ್ರಿಕೆಟ್ನಿಂದ 169 ವಿಕೆಟ್ ಕಬಳಿಸಿದ್ದಾರೆ. ಆದರೆ ಐಪಿಎಲ್ ಮ್ಯಾಚ್ ಫಿಕ್ಸಿಂಗ್ನಿಂದ ಬಿಸಿಸಿಐನಿಂದ ಅಜೀವ ಶಿಕ್ಷೆಗೊಳಗಾಗಿದ್ದ ಅವರನ್ನು ನಿರಪರಾಧಿ ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಬಿಸಿಸಿಐ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಿತ್ತು.