ದುಬೈ : ರೋಹಿತ್ ಮತ್ತೊಮ್ಮೆ ಗಾಯಗೊಂಡರೆ ದೊಡ್ಡ ಅಪಾಯಕ್ಕೆ ಸಿಲುಕಲಿದ್ದಾರೆ ಎಂದು ವೈದ್ಯಕೀಯ ವರದಿಗಳು ಹೇಳುತ್ತಿವೆ. ಹಾಗಾಗಿ, ರೋಹಿತ್ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿಯುವುದು ಉತ್ತಮ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.
ಐಪಿಎಲ್ನಲ್ಲಿ ಮಂಡಿರಜ್ಜು ಗಾಯಕ್ಕೊಳಗಾಗಿ ಚೇತರಿಸಿಕೊಳ್ಳುತ್ತಿರುವ ರೋಹಿತ್, ಫಿಟ್ನೆಸ್ ಸಮಸ್ಯೆಯಿಂದಾಗಿ ಆಸ್ಟ್ರೇಲಿಯಾ ಪ್ರವೇಶಕ್ಕೆ ಆಯ್ಕೆ ಮಾಡಿದ ತಂಡದಿಂದ ಹೊರಬಿದ್ದಿದ್ದರು. ಆದರೆ, ಅವರು ಮುಂಬೈ ಇಂಡಿಯನ್ಸ್ ತಂಡದ ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ ವಿಡಿಯೋ ವೈರಲ್ ಆದ ಕೂಡಲೇ ರೋಹಿತ್ರನ್ನು ಕೈಬಿಟ್ಟಿರುವುದು ವಿವಾದವಾಗಿತ್ತು.
ಈ ಕುರಿತು ಮಾತನಾಡಿರುವ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ರೋಹಿತ್ ತಂಡದಿಂದ ಹೊರಬಿದ್ದಿರುವುದರ ಹಿಂದೆ ನಮ್ಮ ಕೈವಾಡವಿಲ್ಲ. ಅವರ ವೈದ್ಯಕೀಯ ವರದಿಯನ್ನ ಪರಿಶೀಲಿಸಿ ಆಯ್ಕೆ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ ಎಂದಿದ್ದಾರೆ.
"ಈ ಕುರಿತು ನಾನು ಏನು ಹೇಳಲಾಗುವುದಿಲ್ಲ, ನಾನು ಆಯ್ಕೆಯ ಭಾಗವೂ ಅಲ್ಲ. ಆದರೆ, ವೈದ್ಯಕೀಯ ವರದಿಯ ಪ್ರಕಾರ ರೋಹಿತ್ ಮತ್ತೆ ತಮ್ಮಿಂದ ತಾವೇ ಗಾಯಗೊಳಿಸಿಕೊಂಡರೆ ಮುಂದೆ ದೊಡ್ಡ ಅಪಾಯವಿದೆ ಎಂದು ತಿಳಿದು ಬಂದಿದೆ" ಅಂತಾ ರವಿ ಶಾಸ್ತ್ರಿ ಹೇಳಿದ್ದಾರೆ.
ಹಾಗೆ ಮಾತು ಮುಂದುವರಿಸಿದ ಶಾಸ್ತ್ರಿ, ತಂಡದಿಂದ ಗಾಯದ ಕಾರಣ ಹೊರಬಿದ್ದಾಗ ಯಾವುದೇ ಆಟಗಾರನಿಗಾದರೂ ಬೇಸರವಿರುತ್ತದೆ. ಈ ಸಂದರ್ಭದಲ್ಲಿ ನೀವು ಅದರಿಂದ ಎಷ್ಟು ಬೇಗನೆ ಹಿಂತಿರುಗಹುದು ಎಂಬ ಪ್ರಯತ್ನದಲ್ಲಿರುತ್ತಾರೆ.
ಆದರೆ, ಈ ಹಂತದಲ್ಲಿ ನಿಮ್ಮನ್ನು ನೀವೇ ಪರೀಕ್ಷೆ ಮಾಡಿಕೊಳ್ಳಬೇಕು. ನಿಮ್ಮ ತಲೆಯಲ್ಲಿ ನೀವು ಮರಳಲು ಶೇ.100ರಷ್ಟು ಸಮರ್ಥರಿದ್ದೀರಾ ಎಂಬುದರ ಅರಿವು ನಿಮಗೆ ಬರಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.
ನನಗಿರುವ ಭಯವೇನೆಂದರೆ ನಾನೊಬ್ಬ ಕ್ರಿಕೆಟಿಗನಾಗಿ ಇದೇ ಪರಿಸ್ಥಿತಿಯಲ್ಲಿ 1991ರಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿ ನನ್ನ ವೃತ್ತಿ ಜೀವನವನ್ನು ನನ್ನಿಂದಲೇ ಹಾಳು ಮಾಡಿಕೊಂಡಿದ್ದೆ. ಆ ಸಮಯದಲ್ಲಿ ನಾನು 3-4 ತಿಂಗಳು ವಿಶ್ರಾಂತಿ ತೆಗೆದುಕೊಂಡಿದ್ರೆ, ನಾನು ಭಾರತಕ್ಕಾಗಿ ಇನ್ನು 5 ವರ್ಷಗಳ ಕಾಲ ಆಡಬಹುದಿತ್ತು. ಹಾಗಾಗಿ, ರೋಹಿತ್ ಕೂಡ ಇದೇ ತಪ್ಪನ್ನು ಮಾಡುವುದು ಬೇಡ ಎಂದು ಶಾಸ್ತ್ರಿ ಹೇಳಿದ್ದಾರೆ.
ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಅಂದು ವೈದ್ಯರು ನನ್ನನ್ನು ಹೋಗುವುದು ಬೇಡ ಎಂದಿದ್ದರು. ಆದರೆ, ನಾನು ಅತ್ಯುತ್ತಮ ಫಾರ್ಮ್ನಲ್ಲಿದ್ದರಿಂದ ಹೋಗಬೇಕೆಂದು ಬಯಸಿದೆ. ಆದರೆ, ರೋಹಿತ್ ಹಾಗೂ ಅದೇ ಸಮಸ್ಯೆಯಲ್ಲಿರುವ ಇಶಾಂತ್ ಈಗ ಅದೇ ತಪ್ಪನ್ನು ಮಾಡಬಾರದು ಎನ್ನುವುದು ತಮ್ಮ ಅಭಿಪ್ರಾಯ ಎಂದಿದ್ದಾರೆ.