ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಗಾಯಗೊಂಡಿದ್ದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕಿವೀಸ್ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ.
ಐದನೇ ಟಿ20 ಪಂದ್ಯದ ವೇಳೆ ರನ್ಗಳಿಸುವ ಯತ್ನದಲ್ಲಿ ರೋಹಿತ್ ಶರ್ಮಾ ಕಣಕಾಲು (calf injury) ಗಾಯಕ್ಕೆ ತುತ್ತಾಗಿದ್ದರು. 41 ಎಸೆತಗಳಲ್ಲಿ 60 ರನ್ ಗಳಿಸಿದ್ದ ರೋಹಿತ್ ಗಾಯದ ಕಾರಣದಿಂದ ಪಂದ್ಯದಿಂದ ಹೊರ ಉಳಿದಿದ್ದರು. ಇದೀಗ ರೋಹಿತ್ ಮುಂದಿನ ಸರಣಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಕಾರಣದಿಂದ ಸರಣಿಯಿಂದ ಹೊರ ಬಿದ್ದಿದ್ದು ಮತ್ತೊಬ್ಬ ಆರಂಭಿಕ ಆಟಗಾರ ರೋಹಿತ್ ಅನುಪಸ್ಥಿತಿ ದೊಡ್ಡ ಹೊಡೆತವಾಗಲಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ ಏಕದಿನ ಸರಣಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಫೆ.5ರಿಂದ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದೆ. ನಂತರ 2 ಪಂದ್ಯಗಳ ಟೆಸ್ಟ್ ಸರಣಿ ಕೂಡ ಇದೆ.