ಬೆಂಗಳೂರು: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಇದೀಗ ದೇಶಿಯ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮಾತ್ರ ಸಿಮೀತವಾಗಿದ್ದಾರೆ. 2015ರ ನಂತರ ಟೀಂ ಇಂಡಿಯಾದಲ್ಲಿ ಆಡುವ ಯಾವುದೇ ಅವಕಾಶ ಅವರಿಗೆ ಲಭಿಸಿಲ್ಲ. ಆದರೂ ಭರವಸೆ ಕಳೆದುಕೊಳ್ಳದ ಈ ಪ್ಲೇಯರ್ ತಂಡಕ್ಕೆ ಮರಳಲು ಭರ್ಜರಿ ತಯಾರಿಯಲ್ಲಿದ್ದಾರೆ.
2007ರ ಮೊದಲ ಟಿ-20 ವಿಶ್ವಕಪ್ ವಿಜೇತ ತಂಡದ ವೇಳೆ ಭಾರತ ತಂಡದ ಖಾಯಂ ಸದಸ್ಯನಾಗಿದ್ದ ಉತ್ತಪ್ಪ, ತದನಂತರ ತಂಡದಲ್ಲಿ ಅವಕಾಶ ಕಳೆದುಕೊಳ್ಳುತ್ತಾ ಹೋದರು. ಕೊನೆಯದಾಗಿ 2015ರಲ್ಲಿ ಜಿಂಬಾಬ್ವೆ ವಿರುದ್ಧ ಫೈನಲ್ ಪಂದ್ಯವನ್ನಾಡಿದ್ದಾರೆ.
ಟೀಂ ಇಂಡಿಯಾ ಪರ 46 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದು, 6 ಅರ್ಧಶತಕ ಸೇರಿದಂತೆ 934 ರನ್ಗಳಿಕೆ ಮಾಡಿದ್ದಾರೆ. 13 ಟಿ20 ಪಂದ್ಯಗಳಿಂದ 249 ರನ್ ಗಳಿಸಿರುವ ಉತ್ತಪ್ಪ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.
ಈಗಲೂ ವಿಶ್ವಕಪ್ಗೆ ಅರ್ಹತೆ ಪಡೆದುಕೊಳ್ಳಲು ನಾನು ತಯಾರಿ ನಡೆಸಿದ್ದು, ಬೇರೆ ಆಟಗಾರರೊಂದಿಗೆ ಸ್ಪರ್ಧೆ ಮಾಡುವೆ. ಚುಟುಕು ಕ್ರಿಕೆಟ್ನಲ್ಲಿ ನಾನು ತಯಾರಿ ನಡೆಸಿದ್ದು, ಮುಂಬರುವ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತಂಡದ ಪರ ಭಾಗಿಯಾಗುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ 2020 ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ವರೆಗೆ ನಡೆಯುವ ಸಾಧ್ಯತೆ ಇದೆ.