ಮುಂಬೈ : ಕಳೆದ ವಾರ ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ 2020ರ ಐಪಿಎಲ್ನಿಂದ ದೂರ ಉಳಿಯುವುದಾಗಿ ತಿಳಿಸಿ, ಭಾರತಕ್ಕೆ ವಾಪಸ್ ಬಂದಿದ್ದರು. ಆದರೆ, ಅವರು ಹೋಟೆಲ್ನಲ್ಲಿ ಸೂಕ್ತ ಬಾಲ್ಕನಿವುಳ್ಳ ರೂಮ್ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಸಿಎಸ್ಕೆ ಕ್ಯಾಂಪ್ನಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಖಾಸಗಿ ಚಾನಲ್ಗೆ ನೀಡಿದ ಸಂದರ್ಶನವೊಂದರಲ್ಲಿ ಹೋಟೆಲ್ ರೂಮಿನ ವಿವಾದ ನಿಜವಲ್ಲ. ಅದೊಂದು ಕಟ್ಟುಕತೆ ಎಂದು ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ನಿಂದ ಹೊರಬರೇಬೇಕೆಂಬುದು ನನ್ನ ವೈಯಕ್ತಿಕ ನಿರ್ಧಾರ. ನನ್ನ ಕುಟುಂಬಕ್ಕಾಗಿ ನಾನು ಹಿಂತಿರುಗಬೇಕಾಗಿ ಬಂದಿತ್ತು. ಇದು ಕಠಿಣ ನಿರ್ಧಾರವೆಂಬುದು ತಿಳಿದಿದ್ದರೂ, ಆದರೂ ನಾನು ನನ್ನ ಕುಟುಂಬದವರಿಗಾಗಿ ಹಿಂದಿರುಗಬೇಕಾಯಿತು ಎಂದು ತಿಳಿಸಿದ್ದಾರೆ.
ಶ್ರೀನಿವಾಸನ್ ನನ್ನ ತಂದೆಯಿದ್ದಂತೆ : ನಿಮ್ಮ ನಿರ್ಧಾರದಿಂದ ನಂತರ ಶ್ರೀನಿವಾಸನ್ ಅವರ ಅಸಮಧಾನದ ಕಾಮೆಂಟ್ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ, "ಶ್ರೀನಿವಾಸನ್ ನನ್ನ ತಂದೆಯಂತೆ. ಅವರು ನನ್ನ ನಿರ್ಧಾರವನ್ನು ಸದಾ ಬೆಂಬಲಿಸುತ್ತಾರೆ. ಅವರು ನನ್ನ ಹೃದಯಕ್ಕೆ ಹತ್ತಿರವಾಗಿದ್ದಾರೆ. ಅವರೂ ನನ್ನನ್ನು ತಮ್ಮ ಚಿಕ್ಕ ಮಗನ ರೀತಿ ಭಾವಿಸುತ್ತಾರೆ. ಅವರ ಹೇಳಿಕೆಯನ್ನು ಸಂದರ್ಭದಿಂದಾಚೆಗೆ ಅರ್ಥೈಸಿ ವಿವಾದ ಮಾಡಲಾಗುತ್ತಿದೆ. ಅವರು ನನ್ನ ದಿಢೀರ್ ನಿರ್ಧಾರದ ಬಗ್ಗೆ ಹೇಳಿಕೆ ನೀಡುವ ಮೊದಲು ನಾನು ಮನೆಗೆ ಬಂದಿರುವುದಕ್ಕೆ ನಿಜ ಕಾರಣ ಅವರಿಗೆ ತಿಳಿದಿರಲಿಲ್ಲ" ಅಂತಾ ಸುರೇಶ್ ಹೇಳಿದ್ದಾರೆ.